ಬೆಂಗಳೂರು: ರಾಜ್ಯದ ವಿದ್ಯುತ್ ಗ್ರಾಹಕರಿಗೆ ಇಂಧನ ಇಲಾಖೆಯು ಭರ್ಜರಿ ಸಿಹಿ ಸುದ್ದಿಯೊಂದನ್ನು ನೀಡಿದೆ. ಇನ್ಮುಂದೆ ವಿದ್ಯುತ್ ಬಿಲ್ನಲ್ಲಿ ಹೆಸರು ಬದಲಾವಣೆ ಮಾಡಿಸಿಕೊಳ್ಳಲು ಬೆಸ್ಕಾಂ (BESCOM) ಕಚೇರಿಗಳಿಗೆ ಅಲೆದಾಡುವ ಅವಶ್ಯಕತೆಯಿಲ್ಲ. ಗ್ರಾಹಕರು ಮನೆಯಲ್ಲೇ ಕುಳಿತು ಆನ್ಲೈನ್ ಮೂಲಕ ಸುಲಭವಾಗಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.
ಹೆಸರು ಬದಲಾವಣೆ ಪ್ರಕ್ರಿಯೆಯನ್ನು ಸರಳಗೊಳಿಸಲು ಇಂಧನ ಇಲಾಖೆಯು ಹೊಸ ಆನ್ಲೈನ್ ಲಿಂಕ್ ಅನ್ನು ಬಿಡುಗಡೆ ಮಾಡಿದೆ. ಈಗಾಗಲೇ ಸುಮಾರು 5,000ಕ್ಕೂ ಹೆಚ್ಚು ಗ್ರಾಹಕರು ಈ ಸೌಲಭ್ಯವನ್ನು ಯಶಸ್ವಿಯಾಗಿ ಬಳಸಿಕೊಂಡಿದ್ದಾರೆ ಎಂದು ಇಲಾಖೆ ತಿಳಿಸಿದೆ. ಸಾಮಾನ್ಯವಾಗಿ ಹಳೆಯ ಮನೆ ಅಥವಾ ಬಿಲ್ಡಿಂಗ್ ಖರೀದಿಸಿದಾಗ ವಿದ್ಯುತ್ ಬಿಲ್ನಲ್ಲಿ ಹೆಸರು ಬದಲಾಯಿಸಲು ಕಚೇರಿಗೆ ಹೋಗಿ ಅರ್ಜಿ ಸಲ್ಲಿಸುವುದು ದೊಡ್ಡ ಕೆಲಸವಾಗಿತ್ತು. ಆದರೆ ಈಗ ಡಿಜಿಟಲ್ ರೂಪದಲ್ಲಿ ಇದು ಸಾಧ್ಯವಾಗಲಿದೆ.
ಹೆಸರು ಬದಲಾವಣೆ ಮಾಡುವುದು ಹೇಗೆ?
ಮೊದಲು ಬೆಸ್ಕಾಂನ ಅಧಿಕೃತ ವೆಬ್ಸೈಟ್ bescom.co.in ಗೆ ಲಾಗಿನ್ ಆಗಿ.
ಅಲ್ಲಿರುವ ‘ಜನಸ್ನೇಹಿ ವಿದ್ಯುತ್ ಸೇವೆಗಳು’ (Janasnehi Electricity Services) ವಿಭಾಗಕ್ಕೆ ಹೋಗಿ.
ಬಳಿಕ ‘ಓನರ್ಶಿಪ್ ನೇಮ್ ಚೇಂಜ್’ (Ownership Name Change) ಆಯ್ಕೆಯನ್ನು ಆರಿಸಿ.
ಅಗತ್ಯವಿರುವ ಮಾಹಿತಿಗಳನ್ನು ಭರ್ತಿ ಮಾಡಿ ಮತ್ತು ಕೇಳಲಾದ ದಾಖಲೆಗಳನ್ನು ಅಪ್ಲೋಡ್ ಮಾಡಿ.
ಅಗತ್ಯವಿರುವ ದಾಖಲೆಗಳು:
ಆಧಾರ್ ಕಾರ್ಡ್
ಮಾರಾಟ ಪತ್ರ (Sale Deed)
ತೆರಿಗೆ ಪಾವತಿ ಪತ್ರ (Tax Paid Receipt)
ಹಳೆಯ ಮಾಲೀಕರಿಂದ ನಿರಕ್ಷೇಪಣಾ ಪತ್ರ (NOC)
ಇತ್ತೀಚಿನ ಕರೆಂಟ್ ಬಿಲ್
ವಿದ್ಯುತ್ ಪೂರೈಕೆ ಒಪ್ಪಂದ (Power Supply Agreement)
ನಷ್ಟ ಪರಿಹಾರ ಬಾಂಡ್ (Indemnity Bond)
ಇತ್ತೀಚಿನ ಫೋಟೋ
ಈ ಹೊಸ ವ್ಯವಸ್ಥೆಯಿಂದಾಗಿ ಗ್ರಾಹಕರ ಸಮಯ ಉಳಿತಾಯವಾಗುವುದಲ್ಲದೆ, ಮಧ್ಯವರ್ತಿಗಳ ಕಾಟವೂ ತಪ್ಪಲಿದೆ. ಹೆಚ್ಚಿನ ಮಾಹಿತಿಗಾಗಿ ಗ್ರಾಹಕರು ಬೆಸ್ಕಾಂನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬಹುದು.








