ಮಂಡ್ಯ : ಮದ್ದೂರಿನ ಇತಿಹಾಸದಲ್ಲೆ ಪ್ರಪ್ರಥಮ ಬಾರಿಗೆ ಮದ್ದೂರು ಉತ್ಸವ – 2026 ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಣೆ ಮಾಡುತ್ತಿದ್ದು, ಈ ಕಾರ್ಯಕ್ರಮಕ್ಕೆ ಜನತೆ ಪಕ್ಷಾತೀತವಾಗಿ ಬೆಂಬಲ ನೀಡಿ ಯಶಸ್ವಿಗೊಳಿಸುವಂತೆ ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮನವಿ ಮಾಡಿದರು.
ನಗರದ ಪ್ರವಾಸಿ ಮಂದಿರದ ಬಳಿ ಶನಿವಾರ ಬೆಳಿಗ್ಗೆ ಮದ್ದೂರು ಉತ್ಸವದ ಪ್ರಾರಂಭೋತ್ಸವದ ಅಂಗವಾಗಿ ಪ್ರವಾಸಿ ಮಂದಿರದಿಂದ ಸತ್ಯಾಗ್ರಹಸೌಧವರಿಗೆ ಸುಮಾರು 4 ಕಿ.ಮೀ. ದೂರ ಹಮ್ಮಿಕೊಂಡಿದ್ದ ಬೃಹತ್ ಮ್ಯಾರಾಥಾನ್ (ಕಾಲ್ನಡಿಗೆ) ಜಾಥಾಗೆ ಚಾಲನೆ ನೀಡಿ ಮಾತನಾಡಿದರು.
ಮದ್ದೂರು ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ, ಸಚಿವ ಎನ್.ಚಲುವರಾಯಸ್ವಾಮಿ, ಜಾನಪದ, ಕಲೆ, ಸಂಸ್ಕೃತಿಯನ್ನು ಉಳಿಸಿ, ಬೆಳೆಸುವುದು ನಮ್ಮೆಲ್ಲರ ಆದ್ಯತೆಯಾಗಿದೆ. ಮದ್ದೂರು ಕೇವಲ ಭೌಗೋಳಿಕ ಗಡಿಯಲ್ಲ, ಇದು ತ್ಯಾಗರಾಜರ ನಾಡು, ಇತಿಹಾಸದ ಪುಟಗಳಲ್ಲಿ ದಾಖಲಾದ ಪುಣ್ಯಭೂಮಿ. ನಮ್ಮ ಜಾನಪದ, ಕಲೆ, ಕೃಷಿ ಸಂಸ್ಕೃತಿಯನ್ನು ಜಗತ್ತಿಗೆ ಸಾರಲು ಇಂತಹ ಉತ್ಸವಗಳು ಸೇತುವೆಯಾಗಲಿದೆ ಎಂದರು.
ಶಾಸಕ ಕೆ.ಎಂ.ಉದಯ್ ಅವರು ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಸಾಕಷ್ಟು ಮುತುವರ್ಜಿ ವಹಿಸಿಕೊಂಡು ಈ ಬಾರಿ ಮದ್ದೂರಿನ ಇತಿಹಾಸದ ಪುಟಗಳಲ್ಲಿ ಜನರ ಮನಸಿನಲ್ಲಿ ಶಾಶ್ವತವಾಗಿ ಉಳಿಯುವ ರೀತಿಯಲ್ಲಿ ಮದ್ದೂರು ಉತ್ಸವವನ್ನು ವ್ಯವಸ್ಥಿತವಾಗಿ ಆಚರಿಸುವ ಉದ್ದೇಶದಿಂದ ಹಲವಾರು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಜನರು ಅಗತ್ಯ ಸಹಕಾರ ನೀಡಬೇಕು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.
ಶಾಸಕ ಕೆ.ಎಂ.ಉದಯ್ ಮಾತನಾಡಿ, ಮದ್ದೂರು ಉತ್ಸವವನ್ನು ಏ.25 ರಿಂದ ಮೇ.6ವರೆಗೆ ನಡೆಯಲಿದ್ದು, ಏ.25 ರಿಂದ ಏ.30 ರವರೆಗೆ ರಾಸುಗಳ ಜಾತ್ರೆ ನಡೆಯಲಿದೆ. ಉತ್ತಮ ರಾಸುಗಳನ್ನು ಚಾಂಪಿಯನ್ ಎಂದು ಘೋಷಿಸಿ, ಕ್ರಮವಾಗಿ ಮೊದಲ ಚಾಂಪಿಯನ್ ಗೆ 2 ಲಕ್ಷ ರೂ. ಎರಡನೇ ಚಾಂಪಿಯನ್ ಗೆ 1 ಲಕ್ಷ ರೂ. ಮೂರನೇ ಚಾಂಪಿಯನ್ 50 ಸಾವಿರ ನಗದು ಬಹುಮಾನ ಕೊಡಲಾಗುವುದು.
ಅಲ್ಲದೇ 10 ರಾಸುಗಳಿಗೆ 10 ಸಾವಿರ ರೂ. ಸಮಾಧಾನಕರ ಬಹುಮಾನ ನೀಡಲಾಗುವುದು. ಮೊದಲ ಬಾರಿಗೆ ಜಾತ್ರೆಯಲ್ಲಿ ಪಾಲ್ಗೊಳ್ಳುವ ಟಗರುಗಳಿಗೂ ಕೂಡ ಕ್ರಮವಾಗಿ 10 ಸಾವಿರ ಹಾಗೂ 5 ಸಾವಿರ ನಗದು ಬಹುಮಾನ ನೀಡಲಾಗುವುದು. ಬಹುಮಾನ ವಿಜೇತ ರಾಸುಗಳನ್ನು ಏ.30 ರಂದು ಮದ್ದೂರು ಪ್ರವಾಸಿ ಮಂದಿರ ಆವರಣದಿಂದ ಶ್ರೀ ಉಗ್ರ ನರಸಿಂಹಸ್ವಾಮಿ ದೇವಾಲಯದವರೆಗೆ ಮೆರವಣಿಗೆ ಮೂಲಕ ಕರೆತಂದು ಬಹುಮಾನ ನೀಡಿ ಗೌರವಿಸಲಾಗುವುದು ಎಂದರು.
ಮದ್ದೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ 18 ವರ್ಷ ಮೇಲ್ಪಟ್ಟ ಯುವಕ, ಯುವತಿಯರಿಗೆ ಏ.28, 29 ರಂದು ವಾಲಿಬಾಲ್ ಮತ್ತು ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿದ್ದು, ನಗರದ ತಾಲೂಕು ಕ್ರೀಡಾಂಗಣ ಹಾಗೂ ಜೂನಿಯರ್ ಕಾಲೇಜಿನ ಆವರಣದಲ್ಲಿ ಪಂದ್ಯಾವಳಿಗಳು ನಡೆಯಲಿದೆ. ವಿಜೇತ ತಂಡಗಳಿಗೆ ಕ್ರಮವಾಗಿ 50 ಸಾವಿರ, 25 ಸಾವಿರ, 10 ಸಾವಿರ ನಗದು ಬಹುಮಾನ ನೀಡುವುದರ ಜತೆಗೆ 10 ಸಾವಿರ ರೂ. ಸಮಾಧಾನಕರ ಬಹುಮಾನ ನೀಡಲಾಗುವುದು ಎಂದರು.
ಮೇ.1 ರಿಂದ 4 ರವರೆಗೆ ಮದ್ದೂರು ನಗರದ ನಿವಾಸಿಗಳಿಗೆ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿದ್ದು, ಸ್ಪರ್ಧೆಯು ಪ್ರತೀ ವಾರ್ಡ್ ಮಟ್ಟದಲ್ಲಿ ನಡೆಯಲಿದ್ದು, ವಿಜೇತರಾದ ಮಹಿಳೆಯರಿಗೆ ಮಿಕ್ಸಿ, ಕುಕ್ಕರ್, ಬಿಸಿ ನೀರು ಜಗ್ಗು ಬಹುಮಾನವಾಗಿ ನೀಡಲಾಗುವುದು. ಅಲ್ಲದೇ, ವಿಜೇತರಾದ ಮಹಿಳೆಯರಿಗೆ ಮತ್ತೊಮ್ಮೆ ಸ್ಪರ್ಧೆ ಆಯೋಜಿಸಿ ವಾಷಿಂಗ್ ಮೆಷಿನ್, ರೆಫ್ರಿಜಿರೇಟರ್, ಗ್ರೈಂಡರ್ ಹಾಗೂ 10 ಸಮಾಧಾನಕರ ಬಹುಮಾನ ನೀಡಲಾಗುವುದು ಎಂದರು.
ಮೇ.6 ರಂದು ಮದ್ದೂರು ಪಟ್ಟಣದ ಕ್ರೀಡಾಂಗಣದಲ್ಲಿ ಸಂಗೀತ ರಸಸಂಜೆ ಆಯೋಜಿಸಲಾಗಿದ್ದು, ಕಾರ್ಯಕ್ರಮದಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಸೇರಿದಂತೆ ಖ್ಯಾತ ಚಲನಚಿತ್ರ ನಟ ನಟಿಯರು ಪಾಲ್ಗೊಳ್ಳಲಿದ್ದಾರೆ. ಜತೆಗೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವುದು ಎಂದರು.
ಇನ್ನು ಮ್ಯಾರಾಥಾನ್ ಗೂ ಮುನ್ನ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ, ಶಾಸಕರಾದ ಕೆ.ಎಂ.ಉದಯ್, ದಿನೇಶ್ ಗೂಳಿಗೌಡ ಹಾಗೂ ಅಧಿಕಾರಿಗಳು ಗೋಪೂಜೆ ಮಾಡಿದರು. ಬಳಿಕ ಪ್ರವಾಸಿ ಮಂದಿರದಿಂದ ನಗರದ ಪ್ರಮುಖ ಬೀದಿಗಳ ಮೂಲಕ ಶಿವಪುರ ಧ್ವಜ ಸತ್ಯಾಗ್ರಹ ಸೌಧದವರೆಗೆ ಶಾಸಕರಾದ ಕೆ.ಎಂ.ಉದಯ್, ದಿನೇಶ್ ಗೂಳಿಗೌಡ ಅವರು ಕಾಲ್ನಡಿಗೆ ಜಾಥಾದಲ್ಲಿ ಆಗಮಿಸಿ ಮ್ಯಾರಾಥಾನ್ ಗೆ ಸಾಥ್ ನೀಡಿದರು. ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದ ಸಾರ್ವಜನಿಕರು, ಶಿಕ್ಷಕರು, ಅಧಿಕಾರಿಗಳು, ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು ಜಾಥಾದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ಶಿವಪುರದ ಶ್ರೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಉಪಹಾರ ವ್ಯವಸ್ಥೆ ಮಾಡಲಾಗಿತ್ತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಶೋಭಾರಾಣಿ, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಚಲುವರಾಜು, ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ, ನಗರಸಭಾ ಪೌರಾಯುಕ್ತ ರಾಧಿಕಾ, ತಾ.ಪಂ ಇಓ ರಾಮಲಿಂಗಯ್ಯ, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶ್, ಮನ್ ಮುಲ್ ನಿರ್ದೇಶಕ ಹರೀಶ್ ಬಾಬು, ಜಿ.ಪಂ ಮಾಜಿ ಅಧ್ಯಕ್ಷ ಸುರೇಶ್ ಕಂಠಿ, ನಗರಸಭಾ ಮಾಜಿ ಅಧ್ಯಕ್ಷೆ ಕೋಕಿಲಾ ಮುಖಂಡರಾದ ದೇಶಹಳ್ಳಿ ಮೋಹನ್ ಕುಮಾರ್, ಅಜ್ಜಹಳ್ಳಿ ರಾಮಕೃಷ್ಣ, ಸಿ.ಟಿ.ಶಂಕರ್, ಸ್ವರೂಪ್ ಚಂದ್, ಸುನೀಲ್ ಕುಮಾರ್, ದ್ಯಾವಯ್ಯ, ನಾಗಣ್ಣ, ಅರುಣ್ ಕುಮಾರ್ ಸೇರಿದಂತೆ ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ
ಪತ್ರಕರ್ತರ ಮಕ್ಕಳ ಶೈಕ್ಷಣಿಕ ಸಾಧನೆಗೆ ಕೆಯುಡಬ್ಲ್ಯೂಜೆ ಪ್ರೋತ್ಸಾಹ: ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ








