ಬೆಂಗಳೂರು: ರಾಜ್ಯದಲ್ಲಿ ಯಾವ ಮುಖ್ಯಮಂತ್ರಿಯವರು ಮಾಡಲಾಗದ ಜನಪರ ಕಾರ್ಯಗಳು, ಅಭಿವೃದ್ಧಿ ಕೆಲಸಗಳು ಯಡಿಯೂರಪ್ಪನವರು ಕಾಲದಲ್ಲಿ ಆಗಿದ್ದು, ಹಾಗಾಗಿಯೇ ಯಡಿಯೂರಪ್ಪನವರೀಗ ಯಾವುದೇ ರಾಜಕೀಯ ಸ್ಥಾನಮಾನ ಇಲ್ಲದಿದ್ದರೂ ನಾಡಿನ ಜನರು ತಮ್ಮ ಹೃದಯದಲ್ಲಿ ಶಾಶ್ವತವಾದ ಸ್ಥಾನ ನೀಡಿದ್ದಾರೆ ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ಧಾರೆ.
ನಗರದ ಮಾಗಡಿ ರಸ್ತೆಯ ಐತಿಹಾಸಿಕ ಪ್ರಸಿದ್ಧ ಎಲೆಕೊಡಿಗೇಹಳ್ಳಿಯಲ್ಲಿ, ಶ್ರೀ ಮಹಾಗಣಪತಿ, ಶ್ರೀ ಪಂಚಮುಖಿ ಶಿವಲಿಂಗೇಶ್ವರ ಮತ್ತು ಶ್ರೀನಂದಿಬಸವೇಶ್ವರ ನೂತನ ದೇವಾಲಯದ 48 ದಿನಗಳ ಮಂಡಲ ಪೂಜೆ ಮತ್ತು ಧಾರ್ಮಿಕ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪೂಜ್ಯ ತಂದೆಯರಾದ ಯಡಿಯೂರಪ್ಪನವರ ಬಗ್ಗೆ ನಾಡಿನ ಜನರು ಬಹಳ ಅಭಿಮಾನವನ್ನು ಇಟ್ಟುಕೊಂಡಿದ್ದಾರೆ. ಜನರ ಮಾತುಗಳು ಕೇಳಿದರೆ ನಿಜಕ್ಕೂ ಬಹಳ ಹೆಮ್ಮೆ ಎನಿಸುತ್ತದೆ. ತಂದೆಯವರು ನಮಗೆ ಕೊಟ್ಟಿರುವ ಆಸ್ತಿ ಏನೆಂದರೆ, ಅದು ನಾಡಿನ ಜನರ ಪ್ರೀತಿ ಮತ್ತು ಗೌರವ ಎಂದರು.
ಜನರ ಪ್ರೀತಿ, ಗೌರವಕ್ಕೆ ಆಭಾರಿ
ರಾಜ್ಯದ ಯಾವುದೇ ಜಿಲ್ಲೆಗಾಗಲಿ, ಅಥವಾ ತಾಲ್ಲೂಕು, ಗ್ರಾಮಗಳಿಗಾಗಲಿ ಹೋದರೂ ಹಿರಿಯರು, ತಾಯಿಂದಿರರು ಮತ್ತು ಯುವಕ ಮಿತ್ರರು ಬಹಳ ಪ್ರೀತಿಯಿಂದ ಸ್ವಾಗತಿಸುತ್ತಾರೆ. ಇದಕ್ಕೆ ಕಾರಣ ಏನೆಂದರೆ, ವಿಜಯೇಂದ್ರ ಶಿಕಾರಿಪುರ ಶಾಸಕ, ಬಿಜೆಪಿ ರಾಜ್ಯಾಧ್ಯಕ್ಷ ಎನ್ನುವುದಕ್ಕಿಂತ ಹೆಚ್ಚಾಗಿ ನಮ್ಮ ಯಡಿಯೂರಪ್ಪನವರ ಮಗ ಬಂದಿದ್ದಾರೆಂದು ಬಹಳ ಖುಷಿಯಿಂದ ಆದರದಿಂದ ಸ್ವಾಗತ ಮಾಡಿಕೊಳ್ಳುತ್ತಾರೆ. ಮಠಾಧೀಶರು, ಸ್ವಾಮೀಜಿಗಳು ಕೂಡ ತಂದೆಯವರಿಗೆ ನೀಡಿದಷ್ಟೇ ಗೌರವ, ಆಶೀರ್ವಾದವನ್ನೂ ನಮಗೂ ನೀಡುತ್ತಿದ್ದು, ಇದು ಯಡಿಯೂರಪ್ಪನವರ ಮಾಡಿದಂತಹ ಒಳ್ಳೆಯ ಕೆಲಸ ಕಾರ್ಯಗಳ ಫಲ ಎಂದು ಹೇಳಿದರು.
ಮಠಮಾನ್ಯಗಳಿಗೆ ಉದಾರ ನೆರವು
ನಾಡಿನ ಜನರ ಆಶೀರ್ವಾದದಿಂದ ಯಡಿಯೂರಪ್ಪನವರು ನಾಲ್ಲು ಬಾರಿ ಮುಖ್ಯಮಂತ್ರಿಗಳಾಗಿ ರೈತಾಪಿ ವರ್ಗ, ಬಡವರು, ದೀನದಲಿತರರಿಗೆ ಬಹಳಷ್ಟು ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡಿದ್ದಾರೆ. ಮಠ-ಮಾನ್ಯಗಳಿಗೆ, ಗುಡಿ-ಗೋಪುರಗಳಿಗೂ ಜಾತಿ, ಮತ, ಧರ್ಮ ಎಣಿಸದೆ ಎಲ್ಲರಿಗೂ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ; ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಅನ್ನದಾಸೋಹ. ವಿದ್ಯಾರ್ಜನೆಗೆ ನೀಡುತ್ತಿರುವ ಮಠಮಾನ್ಯಗಳಿಗೆ ಅನುದಾನ ನೀಡಿದ್ದು ಸದುಪಯೋಗ ಆಗಿದೆ. ರೈತರು, ಬಡವರು, ಶ್ರಮಿಕರು, ಸಣ್ಣ ವ್ಯಾಪಾರಿಗಳು ಸಂಕಷ್ಟಕ್ಕೊಳಗಾದಗ ಅವರ ನೆರವಿಗೆ ವಿಶೇಷ ಕಾರ್ಯಕ್ರಮ ರೂಪಿಸಿ ಪ್ಯಾಕೇಜ್ ನೀಡಿದ್ದು ಅನುಕರಣೀಯ ಎಂದರು.
ದೇವಾಲಯ ನಿರ್ಮಾಣಕ್ಕೆ 25 ಲಕ್ಷ ರೂ. ಅನುದಾನ
ಪ್ರಾಸ್ತಾವಿಕವಾಗಿ ಮಾತನಾಡಿದ ಎಲೆಕೊಡಿಗೇಹಳ್ಳಿ ಶ್ರೀನಂದಿ ಬಸವೇಶ್ವರ ದೇವಸ್ಥಾನದ ಪುನರುತ್ಥಾರಕ, ದೇಶದ ಯಜಮಾನರಾದ ಡಾ. ಎನ್. ನಂಜುಂಡೇಶ್, ಜೋಳರ ಕಾಲದ ಶ್ರೀನಂದಿ ಬಸವೇಶ್ವರ ದೇವಸ್ಥಾನಕ್ಕೆ ಈ ಹಿಂದೆ ಯಡಿಯೂರಪ್ಪನವರು ಬಂದಿದ್ದರು. ಈಗ ಅವರ ಮಗ ವಿಜಯೇಂದ್ರರವರು ಆಗಮಿಸಿರುವುದು ಈ ಭಾಗದ ಜನರಲ್ಲಿ ಬಹಳ ಸಂತಸ ತಂದಿದೆ. ಈ ದೇವಾಲಯದ ನಿರ್ಮಾಣಕ್ಕೆ ಯಡಿಯೂರಪ್ಪನವರು 25 ಲಕ್ಷ ರೂಪಾಯಿ ಅನುದಾನ ನೀಡಿದ್ದನ್ನು ಇದೇ ವೇಳೆ ಅವರು ಸ್ಮರಿಸಿದರು.
ವಿಶ್ವಾಸ, ನಂಬಿಕೆಗೆ ಚ್ಯುತಿಯಾಗದಿರಲಿ
ಶ್ರೀರಂಗಪಟ್ಟಣ ಚಂದ್ರವನ ಆಶ್ರಮದ ಬೇಬಿ ಮಠದ ಡಾ. ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಮಾತನಾಡಿ, ಜನರು ಪ್ರೀತಿ, ವಿಶ್ವಾಸ, ನಂಬಿಕೆಗೆ ಚ್ಯುತಿ ಬಾರದಂತೆ ನಡೆದುಕೊಳ್ಳಬೇಕಿದೆ. ಸದ್ಭಕ್ತರಿಗೆ ಬೆಳ್ಳಿ, ಬಂಗಾರ, ಹಣ, ಆಸ್ತಿ ಇದಾವುದೂ ನಿಜವಾದ ಸಂಪತ್ತಲ್ಲ. ನಮಗೆ ಎಲ್ಲವನ್ನೂ ದಯಪಾಲಿಸಿರುವ ಭಗವಂತನ ಸ್ಮರಣೆಯೇ ನಿಜವಾದ ಸಂಪತ್ತು. ಭಗವಂತನ ಸ್ಮರಣೆಯಿಂದ ಯಾವಾಗ ವಿಮುಖರಾಗುತ್ತೇವೆಯೋ ಅಂದೇ ಆಪತ್ತು. ಗುರು-ಲಿಂಗ-ಜಂಗಮ ಇವು ಮೂರೂ ಸಂಪತ್ತಿ ಸ್ಥಲದ ತ್ರಿವಿಧ ಸಂಪತ್ತುಗಳಾಗಿವೆ ಅನ್ನುವುದು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ವಿಸ್ತರಿಸುವ ಆರ್ಥಿಕ ಅಥವಾ ಸಾಮಾಜಿಕ ಬಲವನ್ನು ಸೂಚಿಸುತ್ತದೆ, ಇದು ಜೀವನಮಟ್ಟದ ಸುಧಾರಣೆಗಳನ್ನು ತರುತ್ತದೆ ಎಂದರು.
ಧರ್ಮ-ದೇವರು ಮರೆಯಬೇಡಿ
ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಉಜ್ಜಯಿನಿ ಪೀಠದ ಜಗದ್ಗುರು ಶ್ರೀಸಿದ್ದಲಿಂಗ ಶಿವಾಚಾರ್ಯ ರಾಜದೇಶಿಕೇಂದ್ರ ಸ್ವಾಮೀಜಿ, ಸುಖ ಮತ್ತು ಕಷ್ಟಗಳು ಯಾರನ್ನೂ ಬಿಟ್ಟಿಲ್ಲ. ಅದ್ಭುತವಾದ ಬದುಕು ಕಟ್ಟಿಕೊಳ್ಳಲು ಒಂದು ಕಡೆ ಕಷ್ಟಗಳು ಇರಬೇಕು. ಇನ್ನೊಂದು ಕಡೆ ನಂಬಿಕೆಗಳು ಇರಬೇಕು. ಕಷ್ಟಗಳು ಜೀವನದಲ್ಲಿ ಪಾಠ ಕಲಿಸಿದರೆ ನಂಬಿಕೆಗಳು ಮನುಷ್ಯನಲ್ಲಿ ಶಕ್ತಿ ತುಂಬುತ್ತವೆ. ಮನುಷ್ಯ ಬಾಳಿ ಬದುಕಲು ನೀರು ಅನ್ನ ಗಾಳಿ ಬೇಕು. ಆದರ್ಶ ವ್ಯಕ್ತಿಯಾಗಿ ಬಾಳಲು ಪೂರ್ವಾಚಾರ್ಯರ ನುಡಿಗಳು ಬೇಕು. ದೇವರು ಮತ್ತು ಧರ್ಮವನ್ನು ಮರೆಯಬಾರದು ಎಂದು ಹೇಳಿದರು.
ಸಮಾರಂಭದಲ್ಲಿ ದೇವಾಲಯದ ನಿರ್ಮಾಣಕ್ಕೆ ಸಹಕಾರ ನೀಡಿದವನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಎಲೆಕೊಡಿಗೇಹಳ್ಳಿಯ ಶೆಟ್ಟರಾದ ಎ. ಶಿವಣ್ಣ, ಮುಖಂಡರಾದ ಹರೀಶ್ ಆರಾಧ್ಯ, ಅಶೋಕ್, ರೇಣುಕಪ್ಪ, ಸಿದ್ದಲಿಂಗಸ್ವಾಮಿ, ಚಿಕ್ಕಣ್ಣ, ಸುರೇಶ್, ರಾಜಣ್ಣ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.
ಇದಕ್ಕೂ ಮುನ್ನ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಸಾವಿರಾರು ಜನರು ವಿವಿಧ ಜಾನಪದ ಕಲಾತಂಡಗಳೊಂದಿಗೆ ಭವ್ಯ ಮೆರೆವಣಿಗೆ ಮೂಲಕ ಕಾರ್ಯಕ್ರಮಕ್ಕೆ ಬರಮಾಡಿಕೊಂಡರು. ಕಾರ್ಯಕ್ರಮಕ್ಕೂ ಮುನ್ನ ಡಾ. ನಂಜುಂಡೇಶ್ ನಿವಾಸದಲ್ಲಿ ಉಜ್ಜಯಿನಿ ಪೀಠದ ಜಗದ್ಗುರು ಶ್ರೀಸಿದ್ದಲಿಂಗ ಶಿವಾಚಾರ್ಯ ರಾಜದೇಶಿಕೇಂದ್ರ ಸ್ವಾಮೀಜಿಯವರಿಗೆ ದಂಪತಿ ಪಾದಪೂಜೆ ಮಾಡಿದರು.
ಪತ್ರಕರ್ತರ ಮಕ್ಕಳ ಶೈಕ್ಷಣಿಕ ಸಾಧನೆಗೆ ಕೆಯುಡಬ್ಲ್ಯೂಜೆ ಪ್ರೋತ್ಸಾಹ: ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ








