ಶಿವಮೊಗ್ಗ: ಸೊರಬ ತಾಲ್ಲೂಕಿನ ಶಂಕರಿಕೊಪ್ಪ ಗ್ರಾಮದಲ್ಲಿನ ಇನಾಂ ಭೂಮಿಯನ್ನು ನಕಲಿ ದಾಖಲೆಗಳ ಮೂಲಕ ಕಬಳಿಸಲಾಗಿದೆ ಎಂದು ದಲಿತ ಸಂಘರ್ಷ ಸಮಿತಿಯು ಗಂಭೀರ ಆರೋಪ ಮಾಡಿದೆ.
ಇಂದು ಶಿವಮೊಗ್ಗ ಜಿಲ್ಲೆಯ ಸೊರಬ ಪಟ್ಟಣದಲ್ಲಿ ನಡೆದ ದಲಿತ ಮುಖಂಡರ ಸಭೆಯಲ್ಲಿ ಮಾತನಾಡಿದ ಸಮಿತಿಯ ತಾಲ್ಲೂಕು ಸಂಚಾಲಕ ಮಹೇಶ್ ಶಕುನವಳ್ಳಿ ಅವರು, ಗ್ರಾಮದ ಸರ್ವೆ ನಂಬರ್ 3, 4, 6, 30 ಮತ್ತು 47ರಲ್ಲಿನ ಸುಮಾರು 25 ಎಕರೆ ಇನಾಂ ಭೂಮಿಯು ಬಡ ರೈತರ ಸತತ ಹೋರಾಟದ ಫಲವಾಗಿ ಅವರಿಗೆ ಲಭಿಸಿತ್ತು. ಆದರೆ, ರಮೇಶ್ ನಾಡಿಗ್ ಎಂಬ ವ್ಯಕ್ತಿ ಇದು ತನ್ನ ಸ್ವಂತ ಜಮೀನು ಎಂದು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ರೈತರಿಗೆ ದ್ರೋಹ ಬಗೆದಿದ್ದಾರೆ ಎಂದು ದೂರಿದ್ದಾರೆ.
ಈ ಅಕ್ರಮದಲ್ಲಿ ಸಾಗರ ಉಪ ವಿಭಾಗಾಧಿಕಾರಿ (ಎಸಿ) ವಿರೇಶಕುಮಾರ್ ಅವರ ಪಾತ್ರವಿದೆ ಎಂದು ಮಹೇಶ್ ನೇರ ಆರೋಪ ಮಾಡಿದ್ದಾರೆ. ರೈತರಿಗೆ ಭೂಮಿ ಮಂಜೂರು ಮಾಡುವ ಪ್ರಕ್ರಿಯೆ ನಡೆಯುತ್ತಿದ್ದಾಗ, ನಕಲಿ ಭೂ ಮಾಲೀಕರು ನೀಡಿದ ಆಮಿಷಕ್ಕೆ ಒಳಗಾದ ಎಸಿ ಅವರು ಕಾನೂನು ಬಾಹಿರವಾಗಿ ಜಮೀನು ಮಂಜೂರು ಮಾಡಿದ್ದಾರೆ. ತಾಲ್ಲೂಕು ಕಚೇರಿಯ ಮೂಲ ಕಡತಗಳಲ್ಲಿ ಯಾವುದೇ ಅಧಿಕೃತ ದಾಖಲೆಗಳಿಲ್ಲದಿದ್ದರೂ, ನಕಲಿ ಸಹಿ ಇರುವ ಪತ್ರಗಳನ್ನು ಆಧರಿಸಿ ಈ ಆದೇಶ ನೀಡಲಾಗಿದೆ. ವಿರೇಶಕುಮಾರ್ ಅವರು ಭ್ರಷ್ಟಾಚಾರದಲ್ಲಿ ತೊಡಗಿದ್ದು, ಅವರಿಗೆ ಸರ್ಕಾರ ನೀಡುವ ವೇತನ ಸಾಲುತ್ತಿಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ. ಒಂದು ವೇಳೆ ತಾವು ಲಂಚ ಪಡೆದಿಲ್ಲ ಎಂದಾದರೆ ಸಾಗರದ ರೇಣುಕಾಂಬಾ ದೇವಸ್ಥಾನದಲ್ಲಿ ಬಂದು ಪ್ರಮಾಣ ಮಾಡಲಿ ಎಂದು ಅವರು ಎಸಿ ಅವರಿಗೆ ಸವಾಲು ಹಾಕಿದ್ದಾರೆ.
ಉಪ ವಿಭಾಗಾಧಿಕಾರಿಗಳ ಅವಧಿಯಲ್ಲಿ ನಡೆದ ಇಂತಹ ಎಲ್ಲಾ ಅನುಮಾನಾಸ್ಪದ ಪ್ರಕರಣಗಳ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಸಮಿತಿ ಒತ್ತಾಯಿಸಿದೆ. ಭ್ರಷ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಏಪ್ರಿಲ್ 27ರಂದು ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಪ್ರತಿಭಟನೆಯಲ್ಲಿ ಸೊರಬ, ಸಾಗರ ಮತ್ತು ಹೊಸನಗರ ಭಾಗದ ಸಂತ್ರಸ್ತ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕರೆ ನೀಡಲಾಗಿದೆ.
ಈ ಸಭೆಯಲ್ಲಿ ಸಮಿತಿಯ ಪ್ರಮುಖರಾದ ಗುರುರಾಜ್, ಹರೀಶ್ ಚಿಟ್ಟೂರು ಹಾಗೂ ಶಂಕರಿಕೊಪ್ಪ ಗ್ರಾಮದ ಶಿವಕುಮಾರ್, ವಾಯುಕುಮಾರ್ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.








