ವಾಷಿಂಗ್ಟನ್: ರಷ್ಯಾ ಮತ್ತು ಇರಾನ್ ದೇಶಗಳಿಂದ ಕಚ್ಚಾ ತೈಲ ಖರೀದಿಸಲು ಕೆಲವು ರಾಷ್ಟ್ರಗಳಿಗೆ ನೀಡಲಾಗಿದ್ದ ವಿಶೇಷ ರಿಯಾಯಿತಿ ಅಥವಾ ವಿನಾಯಿತಿಯನ್ನು (Waivers) ವಿಸ್ತರಿಸಲು ಅಮೆರಿಕ ಸರ್ಕಾರ ನಿರಾಕರಿಸಿದೆ. ಅಮೆರಿಕದ ಈ ಕಠಿಣ ನಡೆಯಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗುವ ಆತಂಕ ಎದುರಾಗಿದ್ದು, ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಇದರ ಪರಿಣಾಮ ಬೀರುವ ಸಾಧ್ಯತೆಯಿದೆ.
ಉಕ್ರೇನ್ ಮತ್ತು ಮಧ್ಯಪ್ರಾಚ್ಯದ ಯುದ್ಧದ ಹಿನ್ನೆಲೆಯಲ್ಲಿ ರಷ್ಯಾ ಮತ್ತು ಇರಾನ್‌ನ ಆರ್ಥಿಕ ಮೂಲಗಳಿಗೆ ಪೆಟ್ಟು ನೀಡಲು ಅಮೆರಿಕ ಈ ನಿರ್ಧಾರ ಕೈಗೊಂಡಿದೆ. ಈವರೆಗೆ ತೈಲ ಖರೀದಿಗೆ ಇದ್ದ ಸಡಿಲಿಕೆ ಇನ್ನು ಮುಂದೆ ಇರುವುದಿಲ್ಲ ಎಂದು ಶ್ವೇತಭವನ ಸ್ಪಷ್ಟಪಡಿಸಿದೆ.
“ಈ ದೇಶಗಳಿಂದ ತೈಲ ಖರೀದಿಸುವ ರಾಷ್ಟ್ರಗಳು ಅಮೆರಿಕದ ನಿರ್ಬಂಧಗಳನ್ನು ಎದುರಿಸಬೇಕಾಗುತ್ತದೆ,” ಎಂದು ಅಮೆರಿಕದ ವಿದೇಶಾಂಗ ಇಲಾಖೆ ಎಚ್ಚರಿಸಿದೆ. ತೈಲ ರಫ್ತಿನ ಮೂಲಕ ಬರುವ ಹಣವನ್ನು ಈ ದೇಶಗಳು ಯುದ್ಧಕ್ಕಾಗಿ ಬಳಸುತ್ತಿವೆ ಎಂಬುದು ಅಮೇರಿಕಾ ಆರೋಪ.
ಅಮೆರಿಕದ ಈ ಘೋಷಣೆಯ ಬೆನ್ನಲ್ಲೇ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕ್ರೂಡ್ ತೈಲ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ. ಇದು ಪರೋಕ್ಷವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಮೇಲೆ ಒತ್ತಡ ಉಂಟುಮಾಡಬಹುದು.








