ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯ ನಿರ್ಣಯ ಮಂಡಳಿಯು 2026ನೇ ಸಾಲಿನ ಎಸ್ಎಸ್ಎಲ್ಸಿ (ಪರೀಕ್ಷೆ-1) ಫಲಿತಾಂಶವನ್ನು ಪ್ರಕಟಿಸಿದೆ. ಈ ಬಾರಿ ರಾಜ್ಯದ ವಿವಿಧ ಜಿಲ್ಲೆಗಳ ಒಟ್ಟು 7 ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ ಮೊದಲ ಸ್ಥಾನ ಪಡೆದು ಅಭೂತಪೂರ್ವ ಸಾಧನೆ ಮಾಡಿದ್ದಾರೆ.
ಸರ್ಕಾರಿ ಶಾಲೆಯ ಮುಕುಟಕ್ಕೆ ಮತ್ತೊಂದು ಗರಿ
ಈ ಬಾರಿಯ ಫಲಿತಾಂಶದಲ್ಲಿ ವಿಶೇಷ ಆಕರ್ಷಣೆಯೆಂದರೆ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಅಥಣಿ ತಾಲೂಕಿನ ಕಾಟಗೇರಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಪ್ರಾರ್ಥನಾ ನಾಗಪ್ಪ ಬಿರಾದಾರ್ ಪಾಟೀಲ್ ಅವರು ಪೂರ್ಣ ಅಂಕಗಳನ್ನು ಗಳಿಸಿರುವುದು. ಖಾಸಗಿ ಶಾಲೆಗಳ ಪೈಪೋಟಿಯ ನಡುವೆ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಈ ಸಾಧನೆ ಮಾಡಿರುವುದು ಹೆಮ್ಮೆಯ ವಿಷಯವಾಗಿದೆ. ಉಳಿದಂತೆ ಆರು ವಿದ್ಯಾರ್ಥಿಗಳು ಅನುದಾನರಹಿತ ಶಾಲೆಗಳಿಗೆ ಸೇರಿದವರಾಗಿದ್ದಾರೆ.
ಸಾಧಕರ ಪಟ್ಟಿ ಇಲ್ಲಿದೆ:
| ವಿದ್ಯಾರ್ಥಿಯ ಹೆಸರು | ಜಿಲ್ಲೆ | ಶಾಲೆಯ ಹೆಸರು | ಅಂಕಗಳು |
| ಪ್ರಾರ್ಥನಾ ನಾಗಪ್ಪ ಬಿರಾದಾರ್ ಪಾಟೀಲ್ | ಚಿಕ್ಕೋಡಿ | ಸರ್ಕಾರಿ ಪ್ರೌಢಶಾಲೆ ಕಾಟಗೇರಿ, ಅಥಣಿ | 625 |
| ಭರತ್ ಜಿ | ದಾವಣಗೆರೆ | ಶ್ರೀ ವಿದ್ಯಾಲಕ್ಷ್ಮಿ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್, ಚನ್ನಗಿರಿ | 625 |
| ಬೃಂದಾ ಎಂ ತಪ್ಸೆ | ಚಿಕ್ಕಮಗಳೂರು | ಸೇಂಟ್ ಮೇರಿಸ್ ಹೈಸ್ಕೂಲ್ ಕೋಟೆ, ಚಿಕ್ಕಮಗಳೂರು | 625 |
| ಧನುಷ್ ಸುಧೀರ್ ಮೈಸೂರು | ಬೆಂಗಳೂರು ಉತ್ತರ | ಪೂರ್ಣ ಪ್ರಜ್ಞಾ ಎಜುಕೇಶನ್ ಸೆಂಟರ್, ಸದಾಶಿವನಗರ | 625 |
| ಪ್ರೀತಮ್ ಜಿ ಪೂಜಾರಿ | ಉಡುಪಿ | ಮದರ್ ತೆರೇಸಾ ಮೆಮೋರಿಯಲ್ ಸ್ಕೂಲ್, ಕುಂದಾಪುರ | 625 |
| ಸೌಜನ್ಯ ಬಸವರಾಜ್ ಕಂದಕೂರ್ | ವಿಜಯಪುರ | ಆಕ್ಸ್ಫರ್ಡ್ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್, ಮುದ್ದೇಬಿಹಾಳ | 625 |
| ಸುಖದೇವ | ರಾಯಚೂರು | ಬಿ ವಿ ಆರ್ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್, ಮಾನವಿ | 625 |
ಜಿಲ್ಲಾವಾರು ಹಂಚಿಕೆ
ಟಾಪರ್ಗಳ ಪಟ್ಟಿಯಲ್ಲಿ ರಾಜ್ಯದ ವಿವಿಧ ಭಾಗಗಳ ಪ್ರಾತಿನಿಧ್ಯ ಕಂಡುಬಂದಿದೆ. ಚಿಕ್ಕೋಡಿ, ದಾವಣಗೆರೆ, ಚಿಕ್ಕಮಗಳೂರು, ಬೆಂಗಳೂರು ಉತ್ತರ, ಉಡುಪಿ, ವಿಜಯಪುರ ಹಾಗೂ ರಾಯಚೂರು ಜಿಲ್ಲೆಗಳು ಈ ಬಾರಿ ಅಗ್ರಸ್ಥಾನ ಹಂಚಿಕೊಂಡಿವೆ.
ಮಂಡಳಿಯು ಫಲಿತಾಂಶದ ಜೊತೆಗೆ ಜಿಲ್ಲಾವಾರು ಉತ್ತೀರ್ಣ ಪ್ರಮಾಣ ಮತ್ತು ಇತರ ಅಂಕಿಅಂಶಗಳನ್ನು ಶೀಘ್ರದಲ್ಲೇ ಅಧಿಕೃತವಾಗಿ ಹಂಚಿಕೊಳ್ಳಲಿದೆ. ಪೂರ್ಣ ಅಂಕ ಪಡೆದ ಎಲ್ಲಾ ಸಾಧಕ ವಿದ್ಯಾರ್ಥಿಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.
ವಿಧಾನಸಭಾ ಚುನಾವಣೆಗಳ ಬಳಿಕ ಪೆಟ್ರೋಲ್, ಡೀಸೆಲ್ ಬೆಲೆ ಏರುತ್ತಾ?: ಹೀಗಿದೆ ಕೇಂದ್ರದ ಸ್ಪಷ್ಟನೆ








