ಪ್ರಯಾಗ್‌ರಾಜ್ (ಉತ್ತರ ಪ್ರದೇಶ):ದೇಶದ ನ್ಯಾಯಾಲಯಗಳಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಪ್ರಕರಣಗಳ ಸಂಖ್ಯೆಯನ್ನು ನಿಯಂತ್ರಿಸಲು ಅಲಹಾಬಾದ್ ಹೈಕೋರ್ಟ್ ಸರ್ಕಾರಕ್ಕೆ ಮಹತ್ವದ ಸಲಹೆಯೊಂದನ್ನು ನೀಡಿದೆ. ಇನ್ಮುಂದೆ ಯಾವುದೇ ಹೊಸ ಕಾನೂನು ಅಥವಾ ಮಸೂದೆಗಳನ್ನು (Bills) ಮಂಡಿಸುವಾಗ, ಅದರಿಂದ ನ್ಯಾಯಾಲಯಗಳ ಮೇಲೆ ಎಷ್ಟು ಹೆಚ್ಚುವರಿ ವ್ಯಾಜ್ಯಗಳ ಹೊರೆ ಬೀಳಬಹುದು ಎಂಬ ಬಗ್ಗೆ ‘ಲಿಟಿಗೇಶನ್ ಇಂಪ್ಯಾಕ್ಟ್ ಅಸೆಸ್‌ಮೆಂಟ್’ (Litigation Impact Assessment) ನಡೆಸಬೇಕು ಎಂದು ನ್ಯಾಯಾಲಯ ಹೇಳಿದೆ.
ಉತ್ತರ ಪ್ರದೇಶದಲ್ಲಿ ಸುಮಾರು 9,149 ಹೆಚ್ಚುವರಿ ನ್ಯಾಯಾಲಯಗಳ ಸ್ಥಾಪನೆಗೆ ಸಂಬಂಧಿಸಿದ ಸ್ವಯಂ ಪ್ರೇರಿತ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಅಲೋಕ್ ಮಾಥುರ್ ಮತ್ತು ನ್ಯಾ. ಅಮಿತಾಭ್ ಕುಮಾರ್ ರೈ ಅವರ ಪೀಠವು ಈ ಮಹತ್ವದ ಅವಲೋಕನ ಮಾಡಿದೆ. ಒಂದು ಕಡೆ ಪ್ರಕರಣಗಳ ದಾಖಲಾತಿ ಹೆಚ್ಚಾಗುತ್ತಿದ್ದರೆ, ಮತ್ತೊಂದೆಡೆ ಬಾಕಿ ಉಳಿಯುವ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿಲ್ಲ ಎಂದು ಕೋರ್ಟ್ ಕಳವಳ ವ್ಯಕ್ತಪಡಿಸಿದೆ.
ಪ್ರತಿ ಹೊಸ ಕಾನೂನು ಹೊಸ ಹಕ್ಕುಗಳನ್ನು ಸೃಷ್ಟಿಸುತ್ತದೆ ಅಥವಾ ಹಳೆಯದನ್ನು ಬದಲಾಯಿಸುತ್ತದೆ. ಇದು ಅಂತಿಮವಾಗಿ ಕೋರ್ಟ್ ಮೆಟ್ಟಿಲೇರುತ್ತದೆ. ಆದ್ದರಿಂದ, ಮಸೂದೆ ಮಂಡಿಸುವಾಗಲೇ ಅದರ ಪ್ರಭಾವವನ್ನು ಅಂದಾಜಿಸಿದರೆ, ಅದಕ್ಕೆ ತಕ್ಕಂತೆ ಹಣಕಾಸು, ಮೂಲಸೌಕರ್ಯ ಮತ್ತು ಮಾನವ ಸಂಪನ್ಮೂಲಗಳನ್ನು ಮೊದಲೇ ಸಿದ್ಧಪಡಿಸಿಕೊಳ್ಳಲು ಸರ್ಕಾರಕ್ಕೆ ಸುಲಭವಾಗುತ್ತದೆ ಎಂದು ನ್ಯಾಯಾಲಯ ತಿಳಿಸಿದೆ.
ಚೆಕ್ ಬೌನ್ಸ್ ಪ್ರಕರಣಗಳಿಗೆ ಸಂಬಂಧಿಸಿದ (Negotiable Instruments Act) ತಿದ್ದುಪಡಿಯ ನಂತರ ನ್ಯಾಯಾಲಯಗಳಲ್ಲಿ ಪ್ರಕರಣಗಳ ಸಂಖ್ಯೆ ವಿಪರೀತವಾಗಿ ಏರಿರುವುದನ್ನು ಪೀಠವು ಉದಾಹರಣೆಯಾಗಿ ನೀಡಿತು.
ಕೇಂದ್ರ ಸಂಸತ್ತು ಮತ್ತು ರಾಜ್ಯ ಶಾಸನಸಭೆಗಳು ಹೊಸ ಕಾನೂನುಗಳನ್ನು ಜಾರಿಗೆ ತರುವಾಗ ಈ ‘ವ್ಯಾಜ್ಯ ಪ್ರಭಾವ ಮೌಲ್ಯಮಾಪನ’ದ ನಿಯಮವನ್ನು ಕಡ್ಡಾಯಗೊಳಿಸಬೇಕು ಎಂದು ಹೈಕೋರ್ಟ್ ಸಲಹೆ ನೀಡಿದೆ.








