ವಾಷಿಂಗ್ಟನ್:ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ತಾರಕಕ್ಕೇರಿರುವ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ವಿರುದ್ಧದ ಮಿಲಿಟರಿ ದಾಳಿಯನ್ನು ತಾತ್ಕಾಲಿಕವಾಗಿ ತಡೆಹಿಡಿದಿದ್ದಾರೆ. ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಅವರ ವಿಶೇಷ ವಿನಂತಿಯ ಮೇರೆಗೆ ಈ ನಿರ್ಧಾರ ಕೈಗೊಂಡಿರುವುದಾಗಿ ಟ್ರಂಪ್ ತಿಳಿಸಿದ್ದಾರೆ.
ಇರಾನ್ ಮತ್ತು ಅಮೆರಿಕ ನಡುವೆ ಯುದ್ಧದ ಕಾರ್ಮೋಡ ಕವಿದಿರುವ ಈ ಸಂದರ್ಭದಲ್ಲಿ ಪಾಕಿಸ್ತಾನ ಸಂಧಾನಕಾರನ ಪಾತ್ರ ವಹಿಸಿತ್ತು. ಶೆಹಬಾಜ್ ಷರೀಫ್ ಮತ್ತು ಅಸಿಮ್ ಮುನೀರ್ ಅವರು ಟ್ರಂಪ್ ಅವರೊಂದಿಗೆ ಮಾತುಕತೆ ನಡೆಸಿ, ರಾಜತಾಂತ್ರಿಕ ಪರಿಹಾರಕ್ಕಾಗಿ ಕಾಲಾವಕಾಶ ನೀಡುವಂತೆ ಕೋರಿದ್ದರು.
“ಇರಾನ್ ಸರ್ಕಾರವು ಪ್ರಸ್ತುತ ಆಂತರಿಕವಾಗಿ ವಿಭಜನೆಯಾಗಿದೆ. ಪಾಕಿಸ್ತಾನದ ಪ್ರಧಾನಿ ಮತ್ತು ಸೇನಾ ಮುಖ್ಯಸ್ಥರ ಮನವಿಯ ಮೇರೆಗೆ, ಇರಾನ್ ನಾಯಕರು ಒಂದು ಸುಸಂಬದ್ಧ ಪ್ರಸ್ತಾವನೆಯೊಂದಿಗೆ ಬರುವವರೆಗೆ ನಾವು ದಾಳಿಯನ್ನು ತಡೆಹಿಡಿಯುತ್ತಿದ್ದೇವೆ,” ಎಂದು ಟ್ರಂಪ್ ತಮ್ಮ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ನಲ್ಲಿ ಹಂಚಿಕೊಂಡಿದ್ದಾರೆ.
ಕದನ ವಿರಾಮವನ್ನು ವಿಸ್ತರಿಸಿದ್ದರೂ, ಅಮೆರಿಕದ ನೌಕಾಪಡೆಯು ಇರಾನ್‌ನ ಬಂದರುಗಳ ಮೇಲೆ ತನ್ನ ದಿಗ್ಬಂಧನವನ್ನು ಮುಂದುವರಿಸಲಿದೆ. ಇರಾನ್ ಸೂಕ್ತ ಪ್ರಸ್ತಾವನೆಯೊಂದಿಗೆ ಬರದಿದ್ದರೆ ಮಿಲಿಟರಿ ಕಾರ್ಯಾಚರಣೆ ಅನಿವಾರ್ಯ ಎಂದು ಟ್ರಂಪ್ ಎಚ್ಚರಿಸಿದ್ದಾರೆ.








