ತೆಹ್ರಾನ್:ಹಾರ್ಮುಜ್ ಜಲಸಂಧಿಯಲ್ಲಿ ಭಾರತದತ್ತ ಮುಖ ಮಾಡಿದ್ದ ವಾಣಿಜ್ಯ ಹಡಗನ್ನು ವಶಪಡಿಸಿಕೊಂಡ ಘಟನೆಗೆ ಸಂಬಂಧಿಸಿದಂತೆ ಇರಾನ್ ಸರ್ಕಾರವು ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಅಂತರಾಷ್ಟ್ರೀಯ ಸಮುದ್ರ ಕಾನೂನುಗಳ ಉಲ್ಲಂಘನೆ ಮತ್ತು ಭದ್ರತಾ ಕಾರಣಗಳಿಗಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಇರಾನ್ ಸಮರ್ಥಿಸಿಕೊಂಡಿದೆ.
ವಶಪಡಿಸಿಕೊಳ್ಳಲಾದ ಹಡಗು ಹಾರ್ಮುಜ್ ಜಲಸಂಧಿಯಲ್ಲಿ ಸಂಚರಿಸುವಾಗ ಅಂತರಾಷ್ಟ್ರೀಯ ಕಡಲ ನಿಯಮಗಳನ್ನು ಗಾಳಿಗೆ ತೂರಿತ್ತು ಮತ್ತು ಇರಾನ್ ನೌಕಾಪಡೆಯ ಎಚ್ಚರಿಕೆಗಳನ್ನು ನಿರ್ಲಕ್ಷಿಸಿತ್ತು ಎಂದು ಇರಾನ್ ತಿಳಿಸಿದೆ.
ಹಡಗು ಸಮುದ್ರಕ್ಕೆ ರಾಸಾಯನಿಕ ತ್ಯಾಜ್ಯವನ್ನು ಬಿಡುತ್ತಿತ್ತು, ಇದು ಇರಾನ್ನ ಸಮುದ್ರ ತೀರದ ಪರಿಸರಕ್ಕೆ ಧಕ್ಕೆ ತಂದಿದೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
“ಈ ಹಡಗನ್ನು ನ್ಯಾಯಾಲಯದ ಆದೇಶದ ಮೇರೆಗೆ ವಶಕ್ಕೆ ಪಡೆಯಲಾಗಿದೆ. ಸಮಗ್ರ ತನಿಖೆಯ ನಂತರ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು” ಎಂದು ಇರಾನ್ನ ಬಂದರು ಮತ್ತು ಕಡಲ ಸಂಸ್ಥೆ (PMO) ಸ್ಪಷ್ಟಪಡಿಸಿದೆ.
ಹಡಗನ್ನು ವಶಕ್ಕೆ ಪಡೆದ ಇರಾನ್ನ ಕ್ರಾಂತಿಕಾರಿ ಗಾರ್ಡ್ಸ್ (IRGC), ಹಡಗಿನಲ್ಲಿದ್ದ ಎಲ್ಲಾ ಸಿಬ್ಬಂದಿಗಳು ಸುರಕ್ಷಿತವಾಗಿದ್ದಾರೆ ಎಂದು ಖಚಿತಪಡಿಸಿದೆ.








