ಚೆನ್ನೈ:ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ‘ಭಯೋತ್ಪಾದಕ’ (Terrorist) ಎಂಬ ಪದವನ್ನು ಬಳಸಿದ ಆರೋಪದ ಮೇಲೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಚುನಾವಣಾ ಆಯೋಗವು (EC) ನೋಟಿಸ್ ಜಾರಿ ಮಾಡಿದೆ. ಈ ಹೇಳಿಕೆಯು ಮಾದರಿ ಚುನಾವಣಾ ನೀತಿ ಸಂಹಿತೆಯ (MCC) ಉಲ್ಲಂಘನೆಯಾಗಿದೆ ಎಂದು ಬಿಜೆಪಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ತಮಿಳುನಾಡಿನ ಚೆನ್ನೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಎಐಎಡಿಎಂಕೆ ಮತ್ತು ಬಿಜೆಪಿ ಮೈತ್ರಿಯನ್ನು ಟೀಕಿಸುವ ಸಂದರ್ಭದಲ್ಲಿ, “ಅಣ್ಣಾದೊರೈ ಅವರ ಫೋಟೋ ಹಾಕಿಕೊಳ್ಳುವ ಈ ಎಐಎಡಿಎಂಕೆ ಜನರು ಮೋದಿ ಜೊತೆ ಹೇಗೆ ಕೈಜೋಡಿಸುತ್ತಾರೆ? ಅವರು (ಮೋದಿ) ಒಬ್ಬ ಭಯೋತ್ಪಾದಕ,” ಎಂದು ಖರ್ಗೆ ಹೇಳಿದ್ದರು.
ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್ ಮತ್ತು ಕಿರಣ್ ರಿಜಿಜು ನೇತೃತ್ವದ ನಿಯೋಗವು ಚುನಾವಣಾ ಆಯೋಗವನ್ನು ಭೇಟಿ ಮಾಡಿ ದೂರು ನೀಡಿತ್ತು. ಇದು ಪ್ರಧಾನಿ ಹುದ್ದೆಗೆ ಮತ್ತು ದೇಶದ ಪ್ರಜಾಪ್ರಭುತ್ವಕ್ಕೆ ಮಾಡಿದ ಅವಮಾನ ಎಂದು ಬಿಜೆಪಿ ಕಿಡಿಕಾರಿದೆ.
ಬಿಜೆಪಿಯ ದೂರಿನ ಅನ್ವಯ, ಈ ಕೂಡಲೇ ವಿವರಣೆ ನೀಡುವಂತೆ ಮತ್ತು ಸಾರ್ವಜನಿಕ ಕ್ಷಮೆಯಾಚಿಸುವಂತೆ ಕೋರಿ ಆಯೋಗವು ಖರ್ಗೆ ಅವರಿಗೆ ನೋಟಿಸ್ ನೀಡಿದೆ.








