ತ್ರಿಶೂರ್: ಕೇರಳದ ತ್ರಿಶೂರ್ ಜಿಲ್ಲೆಯ ಮುಂಡತ್ತಿಕೋಡ್ ಬಳಿ ಮಂಗಳವಾರ ಮಧ್ಯಾಹ್ನ ಪಟಾಕಿ ತಯಾರಿಕಾ ಘಟಕವೊಂದರಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ ಕನಿಷ್ಠ 13 ಜನರು ಮೃತಪಟ್ಟಿದ್ದಾರೆ ಮತ್ತು 40ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಪ್ರಸಿದ್ಧ ‘ತ್ರಿಶೂರ್ ಪೂರಂ’ (Thrissur Pooram) ಹಬ್ಬಕ್ಕಾಗಿ ಪಟಾಕಿಗಳನ್ನು ಸಿದ್ಧಪಡಿಸುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ. ಮಧ್ಯಾಹ್ನ ಸುಮಾರು 3:30ರ ಸುಮಾರಿಗೆ ಎರಡು ಬಾರಿ ದೊಡ್ಡ ಮಟ್ಟದ ಸ್ಫೋಟಗಳು ಕೇಳಿಬಂದಿದ್ದು, ಇದರ ತೀವ್ರತೆಗೆ ಸುತ್ತಮುತ್ತಲ ಪ್ರದೇಶದ ನಿವಾಸಿಗಳು ಭೂಕಂಪ ಸಂಭವಿಸಿದೆ ಎಂದು ಬೆಚ್ಚಿಬಿದ್ದಿದ್ದರು.
ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (KSDMA) ನೀಡಿರುವ ಮಾಹಿತಿಯಂತೆ 13 ಜನರು ಸಾವನ್ನಪ್ಪಿದ್ದಾರೆ. ಗಾಯಾಳುಗಳಲ್ಲಿ ಐವರ ಸ್ಥಿತಿ ಅತ್ಯಂತ ಗಂಭೀರವಾಗಿದೆ.ಸ್ಫೋಟದ ತೀವ್ರತೆಗೆ ಕಟ್ಟಡವು ಸಂಪೂರ್ಣ ನೆಲಸಮವಾಗಿದ್ದು, ಅವಶೇಷಗಳ ಅಡಿ ಹಲವರು ಸಿಲುಕಿರುವ ಶಂಕೆ ಇದೆ. ಅಗ್ನಿಶಾಮಕ ದಳ ಮತ್ತು ಪೋಲಿಸ್ ತಂಡಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿವೆ.
ಗಾಯಾಳುಗಳನ್ನು ತ್ರಿಶೂರ್ ವೈದ್ಯಕೀಯ ಕಾಲೇಜು ಮತ್ತು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ತಕ್ಷಣವೇ ಹೆಚ್ಚಿನ ವೈದ್ಯಕೀಯ ತಂಡಗಳನ್ನು ನಿಯೋಜಿಸಲು ಆದೇಶಿಸಿದ್ದಾರೆ.ಘಟನೆಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸ್ಫೋಟದ ತೀವ್ರತೆಗೆ ದಟ್ಟವಾದ ಹೊಗೆ ಆಕಾಶಕ್ಕೆ ಚಿಮ್ಮುತ್ತಿರುವುದು ಮತ್ತು ಸ್ಥಳೀಯರು ಪ್ರಾಣಾಪಾಯದಿಂದ ಓಡುತ್ತಿರುವುದು ಮನಕಲಕುವಂತಿದೆ.
#WATCH | Keralam: A fire broke out at a fireworks storage facility in Mundathikode, Thrissur district.
Kerala State Disaster Management Authority (KSDMA) confirms the death of 5 people in the incident. pic.twitter.com/iWdtbZ8u86
— ANI (@ANI) April 21, 2026








