ಟೆಹ್ರಾನ್: ಹೋರ್ಮುಜ್ ಜಲಸಂಧಿಯ ಬಳಿ ಅಮೆರಿಕದ ನೌಕಾಪಡೆಯು ಇರಾನ್‌ನ ಸರಕು ಸಾಗಣೆ ಹಡಗನ್ನು ಬಲವಂತವಾಗಿ ವಶಪಡಿಸಿಕೊಂಡ ಬೆನ್ನಲ್ಲೇ ಇರಾನ್ ಪ್ರಬಲ ತಿರುಗೇಟು ನೀಡಿದೆ. ಪ್ರತಿಕಾರವಾಗಿ ಅಮೆರಿಕದ ಯುದ್ಧನೌಕೆಗಳ ಮೇಲೆ ಡ್ರೋನ್ ದಾಳಿ ನಡೆಸಿರುವುದಾಗಿ ಇರಾನ್ ಮಿಲಿಟರಿ ಕಮಾಂಡ್ ಸೋಮವಾರ (ಏಪ್ರಿಲ್ 20) ಘೋಷಿಸಿದ್ದು, ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿ ಮತ್ತಷ್ಟು ಆಳವಾಗಿದೆ.
ಭಾನುವಾರ ಅಮೆರಿಕದ ನೌಕಾಪಡೆಯು ಇರಾನ್‌ನ ‘ಟೌಸ್ಕಾ’ (TOUSKA) ಎಂಬ ಬೃಹತ್ ಸರಕು ಹಡಗನ್ನು ಸಮುದ್ರದ ಮಧ್ಯದಲ್ಲೇ ತಡೆದಿತ್ತು. ಹಡಗಿನ ಎಂಜಿನ್ ರೂಮ್‌ಗೆ ಗುಂಡು ಹಾರಿಸಿ ಅದನ್ನು ನಿಷ್ಕ್ರಿಯಗೊಳಿಸಿದ ನಂತರ, ಅಮೆರಿಕದ ಮರೀನ್ ಪಡೆಯು ಹಡಗನ್ನು ತನ್ನ ವಶಕ್ಕೆ ಪಡೆದಿತ್ತು.
ಈ ಕ್ರಮವನ್ನು ‘ಸಮುದ್ರ ದರೋಡೆ’ ಎಂದು ಕರೆದಿರುವ ಇರಾನ್‌ನ ‘ಖಾತಮ್ ಅಲ್-ಅನ್ಬಿಯಾ’ ಕೇಂದ್ರ ಕಚೇರಿಯು, ಒಮನ್ ಸಮುದ್ರದಲ್ಲಿ ಬೀಡುಬಿಟ್ಟಿರುವ ಅಮೆರಿಕದ ನೌಕಾಪಡೆಗಳ ಮೇಲೆ ಡ್ರೋನ್‌ಗಳ ಮೂಲಕ ದಾಳಿ ನಡೆಸಿರುವುದಾಗಿ ಹೇಳಿಕೊಂಡಿದೆ. ಅಮೆರಿಕದ ಹಡಗುಗಳಿಗೆ ಹಾನಿಯಾಗಿದೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ.








