ಇಸ್ಲಾಮಾಬಾದ್: ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ನಡೆಯಬೇಕಿದ್ದ ಅಮೆರಿಕ ಮತ್ತು ಇರಾನ್ ನಡುವಿನ ಎರಡನೇ ಸುತ್ತಿನ ಸಂಧಾನ ಮಾತುಕತೆಯನ್ನು ಇರಾನ್ ಅಧಿಕೃತವಾಗಿ ತಿರಸ್ಕರಿಸಿದೆ. ಅಮೆರಿಕದ ‘ಅತಿಯಾದ ಬೇಡಿಕೆ’ಗಳು ಮತ್ತು ‘ಕದನ ವಿರಾಮ ಉಲ್ಲಂಘನೆ’ಯನ್ನು ಕಾರಣವಾಗಿ ನೀಡಿರುವ ಇರಾನ್, ಸದ್ಯದ ಪರಿಸ್ಥಿತಿಯಲ್ಲಿ ಮಾತುಕತೆ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
ಅಮೆರಿಕವು ಅವಾಸ್ತವಿಕ ನಿರೀಕ್ಷೆಗಳನ್ನು ಇಟ್ಟುಕೊಂಡಿದೆ ಮತ್ತು ಪದೇ ಪದೇ ತನ್ನ ನಿಲುವನ್ನು ಬದಲಾಯಿಸುತ್ತಿದೆ ಎಂದು ಇರಾನ್‌ನ ಅಧಿಕೃತ ಸುದ್ದಿ ಸಂಸ್ಥೆ (IRNA) ವರದಿ ಮಾಡಿದೆ.
ಹೋರ್ಮುಜ್ ಜಲಸಂಧಿಯಲ್ಲಿ ಅಮೆರಿಕ ವಿಧಿಸಿರುವ ನೌಕಾ ದಿಗ್ಬಂಧನವು ಈಗಿರುವ ಕದನ ವಿರಾಮ ಒಪ್ಪಂದದ ನೇರ ಉಲ್ಲಂಘನೆಯಾಗಿದೆ ಎಂದು ಟೆಹ್ರಾನ್ ಕಿಡಿಕಾರಿದೆ.ಒಂದು ವೇಳೆ ಇರಾನ್ ಮಾತುಕತೆಗೆ ಬರದಿದ್ದರೆ ಅಥವಾ ಒಪ್ಪಂದಕ್ಕೆ ಸಹಿ ಹಾಕದಿದ್ದರೆ, ಇರಾನ್‌ನ ಮೂಲಸೌಕರ್ಯ ಹಾಗೂ ವಿದ್ಯುತ್ ಸ್ಥಾವರಗಳ ಮೇಲೆ ಕಠಿಣ ದಾಳಿ ನಡೆಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.








