ಬೆಂಗಳೂರು : ಇಂಧನ ಪರಿವರ್ತನೆಗೆ ನೀತಿ, ನಿಯಂತ್ರಣದ ಜತೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ.
ಕಾಮನ್ವೆಲ್ತ್ ಲೀಗಲ್ ಎಜುಕೇಷನ್ ಅಸೋಸಿಯೇಷನ್ ಮತ್ತು ಇಂಧನ ಇಲಾಖೆ ಜಂಟಿಯಾಗಿ ಬೆಂಗಳೂರಿನಲ್ಲಿ ಆಯೋಜಿಸಿದ್ದ ಸುಸ್ಥಿರ ಇಂಧನ, ಭಾರತದ ಕಾರ್ಯಸೂಚಿ 2047-ಇಂಧನ ಭದ್ರತೆಗಾಗಿ ಕಾನೂನು, ನೀತಿ ಹಾಗೂ ಆವಿಷ್ಕಾರಗಳ ಹೊಸ ಚಿಂತನೆ” ಕುರಿತ ಅಂತಾರಾಷ್ಟ್ರೀಯ ಸಮ್ಮೇಳನದ ಎರಡನೇ ದಿನವಾದ ಭಾನುವಾರ ಸಮಾರೋಪ ಭಾಷಣ ಮಾಡಿದ ಅವರು, ಸಾಂಪ್ರದಾಯಿಕ ಮೂಲಗಳಿಂದ ನವೀಕರಿಸಬಹುದಾದ ಮೂಲಗಳಿಗೆ ಇಂಧನ ಪರಿವರ್ತನೆಯು ಮಹತ್ವಾಕಾಂಕ್ಷೆಯಾಗಿ ಉಳಿಯದೇ, ಅನುಷ್ಠಾನಕ್ಕೆ ಸಂಘಟಿತ ಕ್ರಮವಹಿಸಬೇಕಿದೆ ಎಂದರು.
“ನ್ಯಾಯಾಂಗ, ನೀತಿ ನಿರೂಪಕರು, ನಿಯಂತ್ರಕರು ಮತ್ತು ಉದ್ಯಮದ ನಡುವಿನ ಅರ್ಥಪೂರ್ಣ ಚರ್ಚೆಗಳಿಗೆ ಈ ಸಮೇಳನ ವೇದಿಕೆಯಾಯಿತು. ಸುಸ್ಥಿರ ಇಂಧನ ಭವಿಷ್ಯವನ್ನು ರೂಪಿಸುವಲ್ಲಿ ಈ ಸಮ್ಮೇಳನದ ನಿರ್ಣಯಗಳು ಪ್ರಮುಖ ಪಾತ್ರ ವಹಿಸುತ್ತವೆ,” ಎಂದು ಅವರು ಹೇಳಿದರು.
“ಸುಪ್ರೀಂಕೋರ್ಟ್ನ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ಸನ್ಮಾನ್ಯ ಮುಖ್ಯಮಂತ್ರಿಗಳ ಮಾರ್ಗದರ್ಶನವು ನ್ಯಾಯಾಂಗ ಮತ್ತು ಇಂಧನ ವಲಯದ ಪ್ರಮುಖರನ್ನು ಒಟ್ಟುಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಸಮ್ಮೇಳನದ ಯಶಸ್ಸಿಗೆ ಕಾರಣರಾದ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದ ವಿಭು ಬಖ್ರು, ಸಿ.ಎಲ್.ಇ.ಎ. ಅಧ್ಯಕ್ಷರಾದ ಪ್ರೊ. ಡಾ.ಎಸ್. ಶಿವಕುಮಾರ್ ಅವರಿಗೆ ವಿಶೇಷ ಧ್ಯನವಾದಗಳು. ಅಲ್ಲದೇ, ಸಮ್ಮೇಳನದಲ್ಲಿ ಪಾಲ್ಗೊಂಡ ದೇಶ- ವಿದೇಶಗಳ ಪ್ರಮುಖ ನ್ಯಾಯಶಾಸ್ತ್ರಜ್ಞರು, ನೀತಿ ನಿರೂಪಕರು, ಉದ್ಯಮ ಹಾಗೂ ಶಿಕ್ಷಣ ತಜ್ಞರ ಕೊಡುಗೆ ಅಪಾರ,”ಎಂದು ಜಾರ್ಜ್ ಹೇಳಿದರು.
“ನವೀಕರಿಸಬಹುದಾದ ಇಂಧನ ವಿಸ್ತರಣೆ, ಸಂಗ್ರಹಣೆಗೆ ಸೂಕ್ತ ವ್ಯವಸ್ಥೆ ಮತ್ತು ಮೂಲಸೌಕರ್ಯ ಬಲವರ್ಧನೆಯ ಮೂಲಕ ಕರ್ನಾಟಕ ತನ್ನ ಮುಂದಾಳತ್ವವನ್ನು ಮುಂದುವರಿಸಲಿದೆ. ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ನಾವೀನ್ಯತೆಯನ್ನು ಬೆಂಬಲಿಸಲು ಮತ್ತು ಸುಸ್ಥಿರ ಭವಿಷ್ಯವನ್ನು ಸಾಧಿಸಲು ಸಹಯೋಗದೊಂದಿಗೆ ಕೆಲಸ ಮಾಡುತ್ತೇವೆ. ಮುಖ್ಯವಾಗಿ ಕೈಗೆಟುಕುವ ದರದಲ್ಲಿ ಎಲ್ಲರಿಗೂ ಗುಣಮಟ್ಟದ ವಿದ್ಯುತ್ ಪೂರೈಸಲು ನಮ್ಮ ಸರ್ಕಾರ ಬದ್ಧವಾಗಿದೆ,”ಎಂದರು.
ಸಮ್ಮೇಳನದಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್. ಕೆ. ಪಾಟೀಲ್, “ಈ ಸಮ್ಮೇಳನದ ನಿರ್ಣಯಗಳು ನವೀಕರಿಸಬಹುದಾದ ಇಂಧನ ವಲಯದಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗಲಿವೆ. ಇಂಧನ ನೀತಿಯನ್ನು ರೂಪಿಸುವಲ್ಲಿ ನ್ಯಾಯಾಂಗದ ಪಾತ್ರ ನಿರ್ಣಾಯಕವಾಗಿದ್ದು, ಈ ಸಮ್ಮೇಳನವು ಅದಕ್ಕೆ ವೇದಿಕೆಯನ್ನು ಒದಗಿಸಿದೆ. ನವೀಕರಿಸಬಹುದಾದ ಇಂಧನ ವಲಯದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ಅದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇಂಧನ ಸಚಿವರಾದ ಕೆ.ಜೆ. ಜಾರ್ಜ್ ಅವರನ್ನು ಅಭಿನಂದಿಸುತ್ತೇನೆ,” ಎಂದರು.
ಸುಪ್ರೀಂ ಕೋರ್ಟ್ ನ್ಯಾ. ವಿಕ್ರಮ್ ನಾಥ್; ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಎಚ್.ಕೆ. ಪಾಟೀಲ್; ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ; ಕೆಪಿಟಿಸಿಎಲ್ನ ವ್ಯವಸ್ಥಾಪಕ ನಿರ್ದೇಶಕಕರಾದ ಡಾ. ರಾಮ್ ಪ್ರಸಾತ್ ಮನೋಹರ್; ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ. ಎನ್. ಶಿವಶಂಕರ್; ಮತ್ತು ಕ್ರೆಡಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ. ರುದ್ರಪ್ಪಯ್ಯ ಸೇರಿದಂತೆ ಹಿರಿಯ ಅಧಿಕಾರಿಗಳು, ನ್ಯಾಯಾಂಗ ಸದಸ್ಯರು, ನೀತಿ ನಿರೂಪಕರು ಮತ್ತು ಉದ್ಯಮ ಮುಖಂಡರು ಸಮ್ಮೇಳನದಲ್ಲಿ ಉಪಸ್ಥಿತರಿದ್ದರು.
ಬೇಸಿಗೆಯ ಬಿಸಿಲಿಗೆ ‘ಗೊಂದು ಕಟೀರಾ’ ರಾಮಬಾಣ: ಇದು ಜೀರ್ಣಕ್ರಿಯೆ ಮತ್ತು ಚರ್ಮದ ಆರೋಗ್ಯಕ್ಕೆ ಅದ್ಭುತ ಮದ್ದು!
ನಿಮ್ಮ ಮೇಲಿನ ಆರೋಪ ಸುಳ್ಳಾಗಲಿ: ತಂದೆ ವಿನಯ್ ಕುಲಕರ್ಣಿ ಪರ ಪುತ್ರಿ ವೈಶಾಲಿ ಭಾವನಾತ್ಮಕ ಪೋಸ್ಟ್!








