ನವದೆಹಲಿ: ಮಹಿಳಾ ಮೀಸಲಾತಿ ಮಸೂದೆಯು ಲೋಕಸಭೆಯಲ್ಲಿ ಸೋಲನುಭವಿಸಿದ ಬೆನ್ನಲ್ಲೇ ದೇಶವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾಡಿದ ಭಾಷಣವನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀವ್ರವಾಗಿ ಟೀಕಿಸಿದ್ದಾರೆ. ಪ್ರಧಾನಿಯವರ 75 ನಿಮಿಷಗಳ ಭಾಷಣದಲ್ಲಿ ಮಹಿಳೆಯರ ಹಿತಾಸಕ್ತಿಗಿಂತ ಕಾಂಗ್ರೆಸ್ ಪಕ್ಷವನ್ನು ದೂಷಿಸುವುದಕ್ಕೇ ಹೆಚ್ಚಿನ ಆದ್ಯತೆ ನೀಡಲಾಗಿತ್ತು ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.
ಪ್ರಧಾನಿ ಭಾಷಣವನ್ನು ವಿಶ್ಲೇಷಿಸಿದ ಖರ್ಗೆ, “ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಬರೋಬ್ಬರಿ 59 ಬಾರಿ ‘ಕಾಂಗ್ರೆಸ್’ ಹೆಸರನ್ನು ಎತ್ತಿದ್ದಾರೆ. ಆದರೆ ಯಾವ ಮಹಿಳೆಯರಿಗಾಗಿ ಈ ಮಸೂದೆ ಎಂದು ಹೇಳುತ್ತಿದ್ದಾರೋ, ಆ ಮಹಿಳೆಯರ ಬಗ್ಗೆ ಅವರು ಮಾತನಾಡಿದ್ದು ಬಹಳ ಕಡಿಮೆ. ಇದು ಅವರ ರಾಜಕೀಯ ದ್ವೇಷವನ್ನು ತೋರಿಸುತ್ತದೆ,” ಎಂದು ಲೇವಡಿ ಮಾಡಿದ್ದಾರೆ.
ಲೋಕಸಭೆಯಲ್ಲಿ ಮಸೂದೆ ಸೋತಿದ್ದಕ್ಕೆ ವಿರೋಧ ಪಕ್ಷಗಳನ್ನು ಹೊಣೆ ಮಾಡುತ್ತಿರುವ ಸರ್ಕಾರದ ಕ್ರಮವನ್ನು ಖಂಡಿಸಿದ ಖರ್ಗೆ, “ಮಸೂದೆ ಸೋತಿದ್ದು ಸರ್ಕಾರದ ವೈಫಲ್ಯದಿಂದ. ಆದರೆ ಪ್ರಧಾನಿಯವರು ವಿರೋಧ ಪಕ್ಷಗಳ ಮೇಲೆ ಗೂಬೆ ಕೂರಿಸುವ ಮೂಲಕ ತಮ್ಮ ತಪ್ಪುಗಳನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದಾರೆ,” ಎಂದು ಆರೋಪಿಸಿದ್ದಾರೆ.
ಪ್ರಧಾನಿ ಮೋದಿಯವರು ವಿಪಕ್ಷಗಳನ್ನು ‘ಮಹಿಳಾ ವಿರೋಧಿ’ ಎಂದು ಕರೆದಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, “ನಾವು ಮಹಿಳೆಯರಿಗೆ ತಕ್ಷಣದ ಮೀಸಲಾತಿ ಕೇಳುತ್ತಿದ್ದೇವೆ, ಬಿಜೆಪಿ ಅದನ್ನು 2029 ಅಥವಾ 2034ಕ್ಕೆ ತಳ್ಳುತ್ತಿದೆ. ನಿಜವಾದ ಮಹಿಳಾ ವಿರೋಧಿಗಳು ಯಾರು ಎಂಬುದು ದೇಶಕ್ಕೆ ತಿಳಿದಿದೆ,” ಎಂದು ತಿರುಗೇಟು ನೀಡಿದ್ದಾರೆ.
ಇದು ದೇಶವನ್ನುದ್ದೇಶಿಸಿ ಮಾಡಿದ ಭಾಷಣವಾಗಿರಲಿಲ್ಲ, ಬದಲಿಗೆ ಮುಂಬರುವ ವಿಧಾನಸಭಾ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾಡಿದ ಕೇವಲ ‘ಜಾಹೀರಾತು’ ಎಂದು ಖರ್ಗೆ ಟೀಕಿಸಿದ್ದಾರೆ.








