ಕೊಲ್ಕತ್ತಾ: ಪಶ್ಚಿಮ ಬಂಗಾಳದ ರಾಜಧಾನಿ ಕೊಲ್ಕತ್ತಾದ ವೈದ್ಯರೊಬ್ಬರು ತಮ್ಮ ರೋಗಿಗಳಿಗೆ ನೀಡಿರುವ ವಿಶಿಷ್ಟ ‘ರಿಯಾಯಿತಿ’ ಆಫರ್ ಈಗ ದೊಡ್ಡ ವಿವಾದಕ್ಕೆ ನಾಂದಿ ಹಾಡಿದೆ. ಚಿಕಿತ್ಸೆ ಪಡೆಯಲು ಬರುವ ರೋಗಿಗಳು ‘ಜೈ ಶ್ರೀ ರಾಮ್’ ಎಂದು ಘೋಷಣೆ ಕೂಗಿದರೆ ಅವರಿಗೆ ಕನ್ಸಲ್ಟೇಶನ್ ಶುಲ್ಕದಲ್ಲಿ ರಿಯಾಯಿತಿ ನೀಡುವುದಾಗಿ ವೈದ್ಯರು ಘೋಷಿಸಿದ್ದು, ಇದಕ್ಕೆ ವೈದ್ಯಕೀಯ ವಲಯದಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಕೊಲ್ಕತ್ತಾದಲ್ಲಿ ಕ್ಲಿನಿಕ್ ನಡೆಸುತ್ತಿರುವ ಈ ವೈದ್ಯರು, ತಮ್ಮ ಕ್ಲಿನಿಕ್ನ ಹೊರಗೆ ಬೋರ್ಡ್ ಒಂದನ್ನು ಹಾಕಿದ್ದಾರೆ. ಅದರಲ್ಲಿ “ಯಾವ ರೋಗಿಗಳು ಚಿಕಿತ್ಸೆಗೆ ಮುನ್ನ ‘ಜೈ ಶ್ರೀ ರಾಮ್’ ಎಂದು ಹೇಳುತ್ತಾರೋ, ಅವರಿಗೆ ವೈದ್ಯಕೀಯ ಶುಲ್ಕದಲ್ಲಿ (Fees) ವಿಶೇಷ ರಿಯಾಯಿತಿ ನೀಡಲಾಗುವುದು” ಎಂದು ಬರೆಯಲಾಗಿದೆ. ತಮ್ಮ ಭಕ್ತಿ ಮತ್ತು ರಾಷ್ಟ್ರೀಯತೆಯನ್ನು ಪ್ರದರ್ಶಿಸಲು ಈ ನಿರ್ಧಾರ ಕೈಗೊಂಡಿರುವುದಾಗಿ ವೈದ್ಯರು ಸಮರ್ಥಿಸಿಕೊಂಡಿದ್ದಾರೆ.
ಈ ವಿಚಾರ ತಿಳಿಯುತ್ತಿದ್ದಂತೆಯೇ ವೈದ್ಯಕೀಯ ಸಂಘಟನೆಗಳು ಮತ್ತು ಪಶ್ಚಿಮ ಬಂಗಾಳ ವೈದ್ಯಕೀಯ ಮಂಡಳಿ (WBMC) ಕೆಂಡಾಮಂಡಲವಾಗಿದೆ.”ವೈದ್ಯಕೀಯ ವೃತ್ತಿಯು ಜಾತಿ, ಧರ್ಮ ಮತ್ತು ರಾಜಕೀಯಕ್ಕೆ ಅತೀತವಾದದ್ದು. ಚಿಕಿತ್ಸೆಯಲ್ಲಿ ಧರ್ಮವನ್ನು ಬೆರೆಸುವುದು ವೈದ್ಯಕೀಯ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ” ಎಂದು ಮಂಡಳಿ ಆಕ್ಷೇಪಿಸಿದೆ.
ಒಂದು ನಿರ್ದಿಷ್ಟ ಘೋಷಣೆ ಕೂಗುವವರಿಗೆ ಮಾತ್ರ ರಿಯಾಯಿತಿ ನೀಡುವುದು ಇತರ ಧರ್ಮದ ಅಥವಾ ನಂಬಿಕೆಯ ರೋಗಿಗಳಲ್ಲಿ ತಾರತಮ್ಯದ ಭಾವನೆ ಮೂಡಿಸುತ್ತದೆ ಎಂದು ಸಾಮಾಜಿಕ ಕಾರ್ಯಕರ್ತರು ಆತಂಕ ವ್ಯಕ್ತಪಡಿಸಿದ್ದಾರೆ.








