ಸೈಪ್ರಸ್:ಭಾರತದ ಗ್ರ್ಯಾಂಡ್ಮಾಸ್ಟರ್ ಆರ್. ವೈಶಾಲಿ (R. Vaishali) ಅವರು ಸೈಪ್ರಸ್ನಲ್ಲಿ ನಡೆದ ಫಿಡೆ (FIDE) ಮಹಿಳಾ ಕ್ಯಾಂಡಿಡೇಟ್ಸ್ ಚೆಸ್ ಟೂರ್ನಮೆಂಟ್ 2026ರಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಈ ಗೆಲುವಿನೊಂದಿಗೆ ಅವರು ವಿಶ್ವ ಚಾಂಪಿಯನ್ ಪಟ್ಟಕ್ಕಾಗಿ ಚೀನಾದ ಜು ವೆಂಜುನ್ (Ju Wenjun) ಅವರನ್ನು ಎದುರಿಸುವ ಅರ್ಹತೆ ಪಡೆದಿದ್ದಾರೆ.
ಅಂತಿಮ ಸುತ್ತಿನ ಪಂದ್ಯದಲ್ಲಿ ರಷ್ಯಾದ ಕ್ಯಾಟೆರಿನಾ ಲಾಗ್ನೋ ವಿರುದ್ಧ ಅಮೋಘ ಜಯ ಸಾಧಿಸಿದ ವೈಶಾಲಿ, ಒಟ್ಟು 14 ಸುತ್ತುಗಳಲ್ಲಿ 8.5 ಅಂಕಗಳನ್ನು ಗಳಿಸಿ ಅಗ್ರಸ್ಥಾನಕ್ಕೇರಿದರು.
ಕೋನೇರು ಹಂಪಿ ನಂತರ ಮಹಿಳಾ ಕ್ಯಾಂಡಿಡೇಟ್ಸ್ ಟೂರ್ನಿ ಗೆದ್ದ ಎರಡನೇ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ 24 ವರ್ಷದ ವೈಶಾಲಿ ಪಾತ್ರರಾಗಿದ್ದಾರೆ. ಕಜಕಿಸ್ತಾನದ ಬಿಬಿಸಾರ ಅಸ್ಸೌಬಾಯೆವಾ ಅವರು ದಿವ್ಯಾ ದೇಶ್ಮುಖ್ ವಿರುದ್ಧ ಡ್ರಾ ಮಾಡಿಕೊಂಡಿದ್ದರಿಂದ, ವೈಶಾಲಿ ಅವರಿಗೆ ಪ್ರಶಸ್ತಿ ಗೆಲ್ಲಲು ಗೆಲುವು ಅನಿವಾರ್ಯವಾಗಿತ್ತು. ಒತ್ತಡದ ನಡುವೆಯೂ ಲಾಗ್ನೋ ಅವರನ್ನು ಸೋಲಿಸಿ ವೈಶಾಲಿ ಚಾಂಪಿಯನ್ ಪಟ್ಟ ಅಲಂಕರಿಸಿದರು.
ಈ ಗೆಲುವಿನೊಂದಿಗೆ ವೈಶಾಲಿ ಅವರು ಪ್ರಸಕ್ತ ವಿಶ್ವ ಚಾಂಪಿಯನ್ ಚೀನಾದ ಜು ವೆಂಜುನ್ ವಿರುದ್ಧ ಈ ವರ್ಷದ ಅಂತ್ಯದಲ್ಲಿ ನಡೆಯಲಿರುವ ‘ವಿಶ್ವ ಚೆಸ್ ಚಾಂಪಿಯನ್ಶಿಪ್’ ಪಂದ್ಯದಲ್ಲಿ ಸೆಣಸಲಿದ್ದಾರೆ.ಓಪನ್ ವಿಭಾಗದಲ್ಲಿ ಉಜ್ಬೇಕಿಸ್ತಾನದ ಜವೋಖಿರ್ ಸಿಂದರೋವ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ಅವರು ಭಾರತದ ಡಿ. ಗುಕೇಶ್ ವಿರುದ್ಧ ವಿಶ್ವ ಪ್ರಶಸ್ತಿಗಾಗಿ ಸ್ಪರ್ಧಿಸಲಿದ್ದಾರೆ.








