ನವದೆಹಲಿ: ಸಂಸತ್ತಿನಲ್ಲಿ ಮಹಿಳೆಯರಿಗೆ ಶೇ. 33 ರಷ್ಟು ಮೀಸಲಾತಿಯನ್ನು ನೀಡುವ ‘ನಾರಿ ಶಕ್ತಿ ವಂದನ್ ಅಧಿನಿಯಮ’ವನ್ನು ಸುಗಮವಾಗಿ ಜಾರಿಗೆ ತರಲು ಕೇಂದ್ರ ಸರ್ಕಾರವು ಲೋಕಸಭೆಯ ಒಟ್ಟು ಸದಸ್ಯ ಬಲವನ್ನು 850ಕ್ಕೆ ಹೆಚ್ಚಿಸಲು ಗಂಭೀರ ಚಿಂತನೆ ನಡೆಸಿದೆ. 2011ರ ಜನಗಣತಿಯ ಆಧಾರದ ಮೇಲೆ ಕ್ಷೇತ್ರ ಮರುವಿಂಗಡಣೆ (Delimitation) ಪ್ರಕ್ರಿಯೆ ನಡೆಸಿ, ಈ ಬದಲಾವಣೆ ತರಲು ಹೊಸ ಮಸೂದೆಯನ್ನು ಮಂಡಿಸುವ ಸಾಧ್ಯತೆಯಿದೆ.
ಪ್ರಸ್ತುತ ಲೋಕಸಭೆಯಲ್ಲಿ 543 ಸದಸ್ಯ ಬಲವಿದ್ದು, ಇದನ್ನು 850ಕ್ಕೆ ಏರಿಸುವುದರಿಂದ ಪುರುಷ ಸದಸ್ಯರ ಸಂಖ್ಯೆಗೆ ಧಕ್ಕೆಯಾಗದಂತೆ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಲು ಸಾಧ್ಯವಾಗುತ್ತದೆ ಎಂಬುದು ಸರ್ಕಾರದ ಲೆಕ್ಕಾಚಾರವಾಗಿದೆ.
2011ರ ಜನಗಣತಿಯ ಅಂಕಿಅಂಶಗಳನ್ನು ಆಧಾರವಾಗಿಟ್ಟುಕೊಂಡು ಪ್ರತಿ ರಾಜ್ಯದ ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತದೆ. ಇದರಿಂದ ಜನಸಂಖ್ಯೆಗೆ ಅನುಗುಣವಾಗಿ ಸಮಾನ ಪ್ರಾತಿನಿಧ್ಯ ಸಿಗಲಿದೆ.
ಮಹಿಳಾ ಮೀಸಲಾತಿ ಲಾಭ: ಲೋಕಸಭೆ ಸೀಟುಗಳ ಸಂಖ್ಯೆ 850ಕ್ಕೆ ಏರಿಕೆಯಾದರೆ, ಸುಮಾರು 280ಕ್ಕೂ ಹೆಚ್ಚು ಸೀಟುಗಳು ಮಹಿಳೆಯರಿಗಾಗಿಯೇ ಮೀಸಲಾಗಲಿವೆ. ಇದು ಭಾರತದ ಸಂಸದೀಯ ಇತಿಹಾಸದಲ್ಲೇ ಮಹಿಳೆಯರ ಅತಿದೊಡ್ಡ ಪ್ರಾತಿನಿಧ್ಯವಾಗಲಿದೆ.
ಜನಸಂಖ್ಯೆ ಆಧಾರಿತ ಮರುವಿಂಗಡಣೆಯಿಂದ ಉತ್ತರ ಭಾರತದ ರಾಜ್ಯಗಳಿಗೆ ಹೆಚ್ಚು ಸೀಟುಗಳು ಸಿಗಬಹುದು ಮತ್ತು ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗಬಹುದು ಎಂಬ ಆತಂಕವಿತ್ತು. ಆದರೆ, ಒಟ್ಟಾರೆ ಸೀಟುಗಳ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸುವುದರಿಂದ ಈ ಸಮತೋಲನ ಕಾಯ್ದುಕೊಳ್ಳಲು ಸರ್ಕಾರ ಪ್ರಯತ್ನಿಸುತ್ತಿದೆ.
ನೂತನ ಸಂಸತ್ ಭವನದಲ್ಲಿ ಈಗಾಗಲೇ 888 ಸದಸ್ಯರು ಕುಳಿತುಕೊಳ್ಳಲು ವ್ಯವಸ್ಥೆ ಇರುವುದು ಈ ಪ್ರಸ್ತಾವನೆಗೆ ಪೂರಕವಾಗಿದೆ.








