ಕೋಲ್ಕತ್ತಾ:ಪಶ್ಚಿಮ ಬಂಗಾಳದ ಮುಂಬರುವ ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿ, ಮತದಾರರ ಪಟ್ಟಿಯಿಂದ ಹೆಸರು ಕಡಿತಗೊಂಡಿರುವ ಲಕ್ಷಾಂತರ ಜನರಿಗೆ ಸುಪ್ರೀಂ ಕೋರ್ಟ್‌ನಲ್ಲಿ ಹಿನ್ನಡೆಯಾಗಿದೆ. ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಹೆಸರು ಕಳೆದುಕೊಂಡಿರುವ ಮತದಾರರಿಗೆ ತಕ್ಷಣದ ಪರಿಹಾರ ಅಥವಾ ಮತದಾನದ ಹಕ್ಕನ್ನು ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಎಸ್‌ಐಆರ್ (SIR) ಪ್ರಕ್ರಿಯೆಯ ಮೂಲಕ ಮತದಾರರ ಪಟ್ಟಿಯಿಂದ ಸುಮಾರು 91 ಲಕ್ಷ ಹೆಸರುಗಳನ್ನು ಕೈಬಿಡಲಾಗಿತ್ತು. ಈ ಕುರಿತು ಸಲ್ಲಿಕೆಯಾಗಿದ್ದ ಮೇಲ್ಮನವಿಗಳು ಇನ್ನೂ ಬಾಕಿ ಇರುವ ಕಾರಣ, ತಮಗೆ ಮತದಾನಕ್ಕೆ ಅವಕಾಶ ನೀಡಬೇಕೆಂದು ಅರ್ಜಿದಾರರು ಕೋರಿದ್ದರು. ಆದರೆ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರಿದ್ದ ಪೀಠವು ಈ ಹಂತದಲ್ಲಿ ಮಧ್ಯಂತರ ಆದೇಶ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
ಚುನಾವಣಾ ಆಯೋಗವು ಈಗಾಗಲೇ ಬಂಗಾಳದ ಮತದಾರರ ಪಟ್ಟಿಯನ್ನು ಅಂತಿಮಗೊಳಿಸಿ ‘ಫ್ರೀಜ್’ ಮಾಡಿದೆ. ಈ ಹಂತದಲ್ಲಿ ಹೊಸದಾಗಿ ಹೆಸರು ಸೇರಿಸಲು ನಿರ್ದೇಶನ ನೀಡುವುದು ಚುನಾವಣಾ ಪ್ರಕ್ರಿಯೆಗೆ ಅಡ್ಡಿಯಾಗಬಹುದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಹೆಸರು ಕಡಿತಗೊಂಡಿರುವವರು ಈ ಕುರಿತು ರಚಿಸಲಾಗಿರುವ ವಿಶೇಷ ಮೇಲ್ಮನವಿ ನ್ಯಾಯಮಂಡಳಿಗಳನ್ನು (Appellate Tribunals) ಸಂಪರ್ಕಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ. “ಇದು ಅಂತಿಮ ತೀರ್ಪಲ್ಲ, ಆದರೆ ಸದ್ಯಕ್ಕೆ ಯಾವುದೇ ತುರ್ತು ವಿನಾಯಿತಿ ನೀಡಲಾಗುವುದಿಲ್ಲ” ಎಂದು ನ್ಯಾಯಾಲಯ ಹೇಳಿದೆ.








