ನವದೆಹಲಿ:ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಮಹಿಳಾ ಮೀಸಲಾತಿ ಮಸೂದೆಯ ಜಾರಿ ಅತ್ಯಂತ ಕ್ರಾಂತಿಕಾರಿ ಹೆಜ್ಜೆಯಾಗಿದ್ದು, ಇದನ್ನು “21ನೇ ಶತಮಾನದ ಅತ್ಯಂತ ಮಹತ್ವದ ಮತ್ತು ದೂರದೃಷ್ಟಿಯ ನಿರ್ಧಾರ” ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ. ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ‘ನಾರಿ ಶಕ್ತಿ ವಂದನ್ ಸಮ್ಮೇಳನ’ವನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಕಾನೂನು ಕೇವಲ ಕಾಗದದ ಮೇಲಿನ ಬದಲಾವಣೆಯಲ್ಲ, ಬದಲಿಗೆ ಕೋಟ್ಯಂತರ ಮಹಿಳೆಯರ ಸಬಲೀಕರಣದ ಸಂಕೇತ ಎಂದು ಪ್ರತಿಪಾದಿಸಿದರು.
ಮಹಿಳೆಯರು ಆಡಳಿತ ಮತ್ತು ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಭಾಗಿಯಾದಾಗ ವ್ಯವಸ್ಥೆಯಲ್ಲಿ ಸಂವೇದನೆ ಮತ್ತು ದಕ್ಷತೆ ಹೆಚ್ಚುತ್ತದೆ. ಇದು ದೇಶವನ್ನು ಸಮಾನತೆಯತ್ತ ಕೊಂಡೊಯ್ಯುವ ಹೆಜ್ಜೆ ಎಂದು ಮೋದಿ ತಿಳಿಸಿದರು.
ಮಹಿಳಾ ಮೀಸಲಾತಿಯನ್ನು 2029ರ ಲೋಕಸಭಾ ಚುನಾವಣೆಯ ವೇಳೆಗೆ ಸಂಪೂರ್ಣವಾಗಿ ಜಾರಿಗೆ ತರುವ ಗುರಿಯನ್ನು ಸರ್ಕಾರ ಹೊಂದಿದ್ದು, ಈ ನಿಟ್ಟಿನಲ್ಲಿ ಏಪ್ರಿಲ್ 16 ರಿಂದ 18 ರವರೆಗೆ ಸಂಸತ್ತಿನ ವಿಶೇಷ ಅಧಿವೇಶನ ನಡೆಯಲಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು.
ಕಳೆದ 40 ವರ್ಷಗಳಿಂದ ಈ ಮಸೂದೆಯ ಬಗ್ಗೆ ಚರ್ಚೆಗಳು ನಡೆಯುತ್ತಿದ್ದವು. ಆದರೆ ಈಗಿನ ಸರ್ಕಾರವು ರಾಜಕೀಯ ಇಚ್ಛಾಶಕ್ತಿಯಿಂದ ಇದನ್ನು ಸಾಕಾರಗೊಳಿಸುತ್ತಿದೆ. ಇದು ಹಳೆಯ ಕನಸುಗಳನ್ನು ನನಸಾಗಿಸುವ ಮತ್ತು ಭವಿಷ್ಯದ ಭಾರತವನ್ನು ನಿರ್ಮಿಸುವ ನಿರ್ಧಾರವಾಗಿದೆ ಎಂದು ಅವರು ಹೇಳಿದರು.
ಈ ಐತಿಹಾಸಿಕ ನಿರ್ಧಾರವನ್ನು ಜಾರಿಗೊಳಿಸಲು ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ಮರೆತು ಸಹಕರಿಸಬೇಕು ಎಂದು ಮೋದಿ ಮನವಿ ಮಾಡಿದರು.








