ನೋಯ್ಡಾ (ಉತ್ತರ ಪ್ರದೇಶ):ವೇತನ ಹೆಚ್ಚಳಕ್ಕೆ ಆಗ್ರಹಿಸಿ ಕಳೆದ ನಾಲ್ಕೈದು ದಿನಗಳಿಂದ ನೋಯ್ಡಾದಲ್ಲಿ ನಡೆಯುತ್ತಿದ್ದ ಕಾರ್ಮಿಕರ ಪ್ರತಿಭಟನೆ ಇಂದು (ಏಪ್ರಿಲ್ 13, 2026) ಹಠಾತ್ ಹಿಂಸಾಚಾರಕ್ಕೆ ತಿರುಗಿದೆ. ನೋಯ್ಡಾದ ಫೇಸ್-2 ಮತ್ತು ಸೆಕ್ಟರ್ 60 ರ ಕೈಗಾರಿಕಾ ಪ್ರದೇಶಗಳಲ್ಲಿ ಉದ್ರಿಕ್ತ ಕಾರ್ಮಿಕರು ಕಲ್ಲು ತೂರಾಟ ನಡೆಸಿದ್ದು, ಪೊಲೀಸ್ ವಾಹನಗಳು ಸೇರಿದಂತೆ ಹಲವು ವಾಹನಗಳಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ.
ನೆರೆಯ ಹರಿಯಾಣ ರಾಜ್ಯದಲ್ಲಿ ಕನಿಷ್ಠ ವೇತನವನ್ನು 19,000 ರೂಪಾಯಿಗಳಿಗೆ ಏರಿಸಲಾಗಿದೆ. ಆದರೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ಇದು ಇನ್ನೂ 13,000 ರೂಪಾಯಿಗಳ ಆಸುಪಾಸಿನಲ್ಲಿದೆ. ಈ ತಾರತಮ್ಯವೇ ಕಾರ್ಮಿಕರ ಆಕ್ರೋಶಕ್ಕೆ ಮುಖ್ಯ ಕಾರಣ ಎನ್ನಲಾಗಿದೆ.
ಪ್ರತಿಭಟನೆಯ ವೇಳೆ ಮಹಿಳಾ ಕಾರ್ಮಿಕರೊಬ್ಬರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದರು ಎಂಬ ಸುದ್ದಿ ಹರಡುತ್ತಿದ್ದಂತೆ ಪರಿಸ್ಥಿತಿ ಕೈಮೀರಿತು.”ನಾವು ದಿನಕ್ಕೆ 12 ಗಂಟೆ ಕೆಲಸ ಮಾಡಿದರೂ ಕೇವಲ 13,000 ಸಂಬಳ ಸಿಗುತ್ತಿದೆ. ಜೀವನ ನಿರ್ವಹಣೆ ಕಷ್ಟವಾಗಿದೆ” ಎಂದು ಕಾರ್ಮಿಕರು ಅಳಲು ತೋಡಿಕೊಂಡಿದ್ದಾರೆ.








