ವಾಷಿಂಗ್ಟನ್: ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಮಾತುಕತೆಗಳು ಹಳಿತಪ್ಪಿದ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾರ್ಮುಜ್ ಜಲಸಂಧಿಯನ್ನು (Strait of Hormuz) ಸಂಪೂರ್ಣವಾಗಿ ಬಂದ್ ಮಾಡಲು ಅಮೆರಿಕ ನೌಕಾಪಡೆಗೆ (US Navy) ಆದೇಶ ನೀಡಿದ್ದಾರೆ. “ತಕ್ಷಣದಿಂದ ಜಾರಿಗೆ ಬರುವಂತೆ ಜಲಸಂಧಿಯನ್ನು ಪ್ರವೇಶಿಸುವ ಅಥವಾ ಅಲ್ಲಿಂದ ಹೊರಹೋಗುವ ಎಲ್ಲಾ ಹಡಗುಗಳನ್ನು ತಡೆಯಲಾಗುವುದು,” ಎಂದು ಟ್ರಂಪ್ ಗುಡುಗಿದ್ದಾರೆ.
ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಮತ್ತು ಇರಾನ್ ಪ್ರತಿನಿಧಿಗಳ ನಡುವೆ ಸುಮಾರು 21 ಗಂಟೆಗಳ ಕಾಲ ಸುದೀರ್ಘ ಚರ್ಚೆ ನಡೆದಿತ್ತು. ಆದರೆ, ಅಣುಶಕ್ತಿ ಕಾರ್ಯಕ್ರಮವನ್ನು ಕೈಬಿಡಲು ಇರಾನ್ ನಿರಾಕರಿಸಿದ ಕಾರಣ ಮಾತುಕತೆಗಳು ವಿಫಲಗೊಂಡವು. ಈ ಬೆನ್ನಲ್ಲೇ ಟ್ರಂಪ್ ಈ ಆಕ್ರಮಣಕಾರಿ ನಿರ್ಧಾರ ಕೈಗೊಂಡಿದ್ದಾರೆ.
“ವಿಶ್ವದ ಅತ್ಯುತ್ತಮ ನೌಕಾಪಡೆಯಾದ ಅಮೆರಿಕ ನವಿ, ಹಾರ್ಮುಜ್ ಜಲಸಂಧಿಯ ಮೂಲಕ ಸಂಚರಿಸುವ ಯಾವುದೇ ಹಡಗನ್ನು ತಡೆಯುವ ಪ್ರಕ್ರಿಯೆಯನ್ನು ಈಗಲೇ ಆರಂಭಿಸಲಿದೆ,” ಎಂದು ಟ್ರಂಪ್ ತಮ್ಮ ‘ಟ್ರೂತ್ ಸೋಶಿಯಲ್’ ಖಾತೆಯಲ್ಲಿ ಘೋಷಿಸಿದ್ದಾರೆ.
ಅಕ್ರಮ ಸುಂಕಕ್ಕೆ ಕಡಿವಾಣ: ಇರಾನ್‌ಗೆ ಅಕ್ರಮವಾಗಿ ಸುಂಕ (Toll) ಪಾವತಿಸಿ ಅಂತರಾಷ್ಟ್ರೀಯ ಜಲಪ್ರದೇಶದಲ್ಲಿ ಸಂಚರಿಸುವ ಹಡಗುಗಳನ್ನು ವಶಪಡಿಸಿಕೊಳ್ಳಲು ನೌಕಾಪಡೆಗೆ ಸೂಚನೆ ನೀಡಲಾಗಿದೆ.
“ನಮ್ಮ ಮೇಲೆ ಅಥವಾ ಶಾಂತಿಯುತ ಹಡಗುಗಳ ಮೇಲೆ ಗುಂಡು ಹಾರಿಸುವ ಯಾವುದೇ ಇರಾನಿ ಪ್ರಜೆಯನ್ನು ನರಕಕ್ಕೆ ಕಳುಹಿಸಲಾಗುವುದು,” ಎಂದು ಟ್ರಂಪ್ ಅತ್ಯಂತ ಕಠಿಣ ಪದಗಳಲ್ಲಿ ಎಚ್ಚರಿಸಿದ್ದಾರೆ.








