ಚೆನ್ನೈ: ದಕ್ಷಿಣ ಭಾರತದ ಖ್ಯಾತ ನಟ ಮತ್ತು ತಮಿಳಗ ವೆಟ್ರಿ ಕಳಗಂ (TVK) ಅಧ್ಯಕ್ಷ ವಿಜಯ್ ನಟನೆಯ ಬಹುನಿರೀಕ್ಷಿತ ಚಿತ್ರ ‘ಜನ ನಾಯಕನ್’ ಬಿಡುಗಡೆಗೂ ಮುನ್ನವೇ ಎಚ್‌ಡಿ (HD) ಗುಣಮಟ್ಟದಲ್ಲಿ ಪೈರಸಿ ಸೈಟ್‌ಗಳಲ್ಲಿ ಲೀಕ್ ಆಗಿರುವುದು ಈಗ ರಾಜಕೀಯ ಸಮರಕ್ಕೆ ನಾಂದಿ ಹಾಡಿದೆ. ಈ ವಿಚಾರವಾಗಿ ಕಾಂಗ್ರೆಸ್ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರೆ, ಬಿಜೆಪಿ ಕೌಂಟರ್ ಅಟ್ಯಾಕ್ ನಡೆಸಿದೆ.
“ಕೇಂದ್ರದ ಸೆನ್ಸಾರ್ ಮಂಡಳಿಯು (CBFC) ಉದ್ದೇಶಪೂರ್ವಕವಾಗಿ ಚಿತ್ರಕ್ಕೆ ಪ್ರಮಾಣಪತ್ರ ನೀಡಲು ವಿಳಂಬ ಮಾಡಿದ್ದರಿಂದಲೇ ಈ ಲೀಕ್ ಸಂಭವಿಸಿದೆ. ಇದು ವಿಜಯ್ ಅವರ ರಾಜಕೀಯ ಬೆಳವಣಿಗೆಯನ್ನು ಸಹಿಸದ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಪಿತೂರಿ,” ಎಂದು ಕಾಂಗ್ರೆಸ್ ಸಂಸದ ಮಾಣಿಕಂ ಟ್ಯಾಗೋರ್ ಮತ್ತು ಇತರ ನಾಯಕರು ಕಿಡಿಕಾರಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಇಂತಹ ಕೃತ್ಯ ಎಸಗಲಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್‌ನ ಆರೋಪಗಳನ್ನು ತಳ್ಳಿಹಾಕಿರುವ ಬಿಜೆಪಿ, “ಪೈರಸಿ ಎನ್ನುವುದು ಒಂದು ಅಪರಾಧ. ಚಿತ್ರದ ಲೀಕ್‌ಗೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ. ಕಾಂಗ್ರೆಸ್ ಹತಾಶೆಯಿಂದ ಇಂತಹ ಆಧಾರರಹಿತ ಆರೋಪಗಳನ್ನು ಮಾಡುತ್ತಿದೆ. ಸೃಜನಶೀಲ ಸ್ವಾತಂತ್ರ್ಯದ ಹೆಸರಿನಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದನ್ನು ಸೆನ್ಸಾರ್ ಮಂಡಳಿ ಪ್ರಶ್ನಿಸುವುದು ಅದರ ಕರ್ತವ್ಯ,” ಎಂದು ಸಮರ್ಥಿಸಿಕೊಂಡಿದೆ.
ಸುಮಾರು ₹300 ರಿಂದ ₹500 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿರುವ ಈ ಚಿತ್ರ, ಏಪ್ರಿಲ್ 10ರಂದು ಪೈರಸಿ ವೆಬ್‌ಸೈಟ್‌ಗಳಲ್ಲಿ ಸಂಪೂರ್ಣವಾಗಿ ಲೀಕ್ ಆಗಿದೆ. ಇದರಿಂದ ಚಿತ್ರದ ನಿರ್ಮಾಪಕರಿಗೆ (KVN ಪ್ರೊಡಕ್ಷನ್ಸ್) ಕೋಟ್ಯಂತರ ರೂಪಾಯಿ ನಷ್ಟವಾಗುವ ಭೀತಿ ಎದುರಾಗಿದೆ.








