ನವದೆಹಲಿ: ಅಮೆರಿಕ ಮತ್ತು ಇರಾನ್ ನಡುವೆ ಘೋಷಿಸಲಾಗಿರುವ ಎರಡು ವಾರಗಳ ತಾತ್ಕಾಲಿಕ ಕದನ ವಿರಾಮದ ಬೆನ್ನಲ್ಲೇ, ಭಾರತದ ಅಡುಗೆ ಅನಿಲ ಹೊತ್ತ ಹಡಗು ‘ಜಗ್ ವಿಕ್ರಮ್’ (Jag Vikram) ಯಶಸ್ವಿಯಾಗಿ ಹಾರ್ಮುಜ್ ಜಲಸಂಧಿಯನ್ನು ದಾಟಿದೆ. ಕದನ ವಿರಾಮದ ನಂತರ ಈ ಆಯಕಟ್ಟಿನ ಜಲಮಾರ್ಗವನ್ನು ದಾಟಿದ ಮೊದಲ ಭಾರತೀಯ ಹಡಗು ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ.
ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿಯಿಂದಾಗಿ ಸ್ಥಗಿತಗೊಂಡಿದ್ದ ಹಡಗುಗಳ ಸಂಚಾರ ಈಗ ಪುನರಾರಂಭಗೊಂಡಿದೆ. ಸುಮಾರು 20,400 ಟನ್ ಅಡುಗೆ ಅನಿಲವನ್ನು (LPG) ಹೊತ್ತಿರುವ ಜಗ್ ವಿಕ್ರಮ್, ಶನಿವಾರ ಬೆಳಿಗ್ಗೆ ಸುರಕ್ಷಿತವಾಗಿ ಹಾರ್ಮುಜ್ ಜಲಸಂಧಿಯನ್ನು ದಾಟಿ ಓಮನ್ ಕೊಲ್ಲಿಯತ್ತ ಸಾಗಿದೆ.
ಗ್ರೇಟ್ ಈಸ್ಟರ್ನ್ ಶಿಪ್ಪಿಂಗ್ ಕಂಪನಿಗೆ ಸೇರಿದ ಈ ಬೃಹತ್ ಟ್ಯಾಂಕರ್‌ನಲ್ಲಿ 24 ಮಂದಿ ಭಾರತೀಯ ಸಿಬ್ಬಂದಿಗಳಿದ್ದಾರೆ. ಈ ಹಡಗು ಏಪ್ರಿಲ್ 15 ರಂದು ಮುಂಬೈ ತೀರಕ್ಕೆ ತಲುಪುವ ನಿರೀಕ್ಷೆಯಿದೆ. ಸದ್ಯ ಪರ್ಷಿಯನ್ ಕೊಲ್ಲಿಯಲ್ಲಿ ಇನ್ನೂ 15 ಭಾರತೀಯ ಹಡಗುಗಳು ಸಿಲುಕಿದ್ದು, ಅವುಗಳನ್ನು ಕೂಡ ಶೀಘ್ರದಲ್ಲೇ ತಾಯ್ನಾಡಿಗೆ ಕರೆತರಲು ವಿದೇಶಾಂಗ ಮತ್ತು ಹಡಗು ಸಚಿವಾಲಯಗಳು ಶ್ರಮಿಸುತ್ತಿವೆ.








