ವಾಷಿಂಗ್ಟನ್: ಅಮೆರಿಕ ಮತ್ತು ಇರಾನ್ ನಡುವಿನ ಸುದೀರ್ಘ ಸಂಘರ್ಷಕ್ಕೆ ಅಂತ್ಯಹಾಡಲು ಪಾಕಿಸ್ತಾನದ ಇಸ್ಲಾಮಾಬಾದ್ನಲ್ಲಿ ಐತಿಹಾಸಿಕ ಮಾತುಕತೆಗಳು ನಡೆಯುತ್ತಿವೆ. ಈ ಬೆನ್ನಲ್ಲೇ ಶ್ವೇತಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ಜೊತೆಗಿನ ಸಂಧಾನದ ಫಲಿತಾಂಶದ ಬಗ್ಗೆ ತಮಗೆ ಕಿಂಚಿತ್ತೂ ಆತಂಕವಿಲ್ಲ ಎಂದು ಗುಡುಗಿದ್ದಾರೆ.
”ನಾವು ಗೆದ್ದಾಗಿದೆ”: ಸಂಧಾನದ ಫಲಿತಾಂಶದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಟ್ರಂಪ್, “ಮಾತುಕತೆಯಲ್ಲಿ ಒಪ್ಪಂದವಾಗಲಿ ಅಥವಾ ಬಿಡಲಿ, ಅದರಿಂದ ನಮಗೇನು ವ್ಯತ್ಯಾಸವಾಗದು. ಏಕೆಂದರೆ ನಾವು ಈಗಾಗಲೇ ಗೆದ್ದಿದ್ದೇವೆ. ಮಿಲಿಟರಿ ಪರವಾಗಿ ನಾವು ಇರಾನ್ ಅನ್ನು ಸೋಲಿಸಿದ್ದೇವೆ,” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜಾಗತಿಕ ಇಂಧನ ಪೂರೈಕೆಯ ಪ್ರಮುಖ ಕೇಂದ್ರವಾದ ಹಾರ್ಮುಜ್ ಜಲಸಂಧಿಯನ್ನು ಇರಾನ್ನ ಪ್ರಭಾವದಿಂದ ಮುಕ್ತಗೊಳಿಸುವ ಪ್ರಕ್ರಿಯೆಯನ್ನು ಅಮೆರಿಕ ಆರಂಭಿಸಿದೆ ಎಂದು ಟ್ರಂಪ್ ತಿಳಿಸಿದ್ದಾರೆ. “ಅವರ ನೌಕಾಪಡೆ ಸಂಪೂರ್ಣವಾಗಿ ನಾಶವಾಗಿದೆ,” ಎಂದು ಅವರು ಪ್ರತಿಪಾದಿಸಿದ್ದಾರೆ.
ಒಂದು ವೇಳೆ ಚೀನಾ ದೇಶವು ಇರಾನ್ಗೆ ಶಸ್ತ್ರಾಸ್ತ್ರಗಳನ್ನು ಪೂರೈಸಲು ಮುಂದಾದರೆ, ಚೀನಾ ಭಾರೀ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಟ್ರಂಪ್ ಇದೇ ವೇಳೆ ಎಚ್ಚರಿಸಿದ್ದಾರೆ.
ಉಪಾಧ್ಯಕ್ಷ ಜೆಡಿ ವ್ಯಾನ್ಸ್ ನೇತೃತ್ವದ ಅಮೆರಿಕದ ಉನ್ನತ ಮಟ್ಟದ ನಿಯೋಗವು ಕಳೆದ ಹಲವು ಗಂಟೆಗಳಿಂದ ಇಸ್ಲಾಮಾಬಾದ್ನಲ್ಲಿ ಇರಾನ್ ಅಧಿಕಾರಿಗಳೊಂದಿಗೆ ನೇರ ಮಾತುಕತೆ ನಡೆಸುತ್ತಿದೆ.








