ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಅಮೆರಿಕಾ ಮತ್ತು ಇರಾನ್ ನಡುವೆ ಸಂಧಾನ ಪ್ರಕ್ರಿಯೆ ನಡೆಯುತ್ತಿದ್ದರೂ, ಇತ್ತ ಲೆಬನಾನ್ ಮೇಲೆ ಇಸ್ರೇಲ್ ನಡೆಸುತ್ತಿರುವ ಭೀಕರ ದಾಳಿಯು ಭಾರತದ ಆತಂಕಕ್ಕೆ ಕಾರಣವಾಗಿದೆ. ಲೆಬನಾನ್‌ನಲ್ಲಿ ನಾಗರಿಕರ ಸಾವು-ನೋವುಗಳು ಹೆಚ್ಚುತ್ತಿರುವುದನ್ನು ಭಾರತವು “ಅತ್ಯಂತ ಆತಂಕಕಾರಿ” (Very Disturbing) ಎಂದು ಕರೆದಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ.
ಕಳೆದ ಬುಧವಾರ ನಡೆದ ದಾಳಿಯಲ್ಲಿ ಸುಮಾರು 300ಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವುದು ಜಾಗತಿಕ ಮಟ್ಟದಲ್ಲಿ ತಲ್ಲಣ ಮೂಡಿಸಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಮಾತನಾಡಿ, “ಲೆಬನಾನ್‌ನಲ್ಲಿ ಹೆಚ್ಚಿನ ಸಂಖ್ಯೆಯ ನಾಗರಿಕರು ಪ್ರಾಣ ಕಳೆದುಕೊಳ್ಳುತ್ತಿರುವುದು ನಮಗೆ ತೀವ್ರ ಕಳವಳ ತಂದಿದೆ. ನಾಗರಿಕರ ರಕ್ಷಣೆಯೇ ನಮ್ಮ ಮೊದಲ ಆದ್ಯತೆಯಾಗಬೇಕು” ಎಂದು ಹೇಳಿದ್ದಾರೆ.
ಯಾವುದೇ ದೇಶದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸುವುದು ಅಗತ್ಯ. ಅಂತರಾಷ್ಟ್ರೀಯ ಕಾನೂನುಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಭಾರತ ಪ್ರತಿಪಾದಿಸಿದೆ.
ಲೆಬನಾನ್‌ನಲ್ಲಿ ವಿಶ್ವಸಂಸ್ಥೆಯ ಶಾಂತಿ ಪಾಲನಾ ಪಡೆಯ (UNIFIL) ಭಾಗವಾಗಿ ಸುಮಾರು 600ಕ್ಕೂ ಹೆಚ್ಚು ಭಾರತೀಯ ಸೈನಿಕರು ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಸುರಕ್ಷತೆಯ ದೃಷ್ಟಿಯಿಂದಲೂ ಅಲ್ಲಿನ ಬೆಳವಣಿಗೆಗಳು ಭಾರತಕ್ಕೆ ನಿರ್ಣಾಯಕವಾಗಿವೆ.
ಸದ್ಯ ಲೆಬನಾನ್‌ನಲ್ಲಿ ಸುಮಾರು 1,000 ಮಂದಿ ಭಾರತೀಯ ಪ್ರಜೆಗಳಿದ್ದು, ಅವರೊಂದಿಗೆ ಬೆೈರೂಟ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ನಿರಂತರ ಸಂಪರ್ಕದಲ್ಲಿದೆ.








