ನವದೆಹಲಿ: ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಯು (CBSE) ದೇಶಾದ್ಯಂತ ಇರುವ ತನ್ನ ಸಂಯೋಜಿತ ಶಾಲೆಗಳಿಗೆ ಮಹತ್ವದ ಸೂಚನೆಯೊಂದನ್ನು ನೀಡಿದೆ. ಇನ್ನು ಮುಂದೆ 6ನೇ ತರಗತಿಯಿಂದಲೇ ‘ಮೂರನೇ ಭಾಷೆ’ಯನ್ನು (Third Language) ಬೋಧಿಸುವುದನ್ನು ಕಡ್ಡಾಯವಾಗಿ ಮತ್ತು ತಕ್ಷಣದಿಂದಲೇ ಜಾರಿಗೆ ತರುವಂತೆ ಆದೇಶ ಹೊರಡಿಸಿದೆ.
ರಾಷ್ಟ್ರೀಯ ಶಿಕ್ಷಣ ನೀತಿ (NEP 2020) ಅಡಿಯಲ್ಲಿ ಬಹುಭಾಷಾ ಕಲಿಕೆಗೆ ಒತ್ತು ನೀಡುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ವಿದ್ಯಾರ್ಥಿಗಳು ಚಿಕ್ಕ ವಯಸ್ಸಿನಲ್ಲೇ ಹೆಚ್ಚಿನ ಭಾಷೆಗಳನ್ನು ಕಲಿಯುವುದರಿಂದ ಅವರ ಜ್ಞಾನಾರ್ಜನೆ ಮತ್ತು ಸಾಂಸ್ಕೃತಿಕ ತಿಳುವಳಿಕೆ ವಿಸ್ತಾರವಾಗುತ್ತದೆ ಎಂದು ಮಂಡಳಿ ಅಭಿಪ್ರಾಯಪಟ್ಟಿದೆ.
6ನೇ ತರಗತಿಯಿಂದ 8ನೇ ತರಗತಿಯವರೆಗಿನ ಎಲ್ಲಾ ವಿದ್ಯಾರ್ಥಿಗಳಿಗೆ ಇದು ಅನ್ವಯವಾಗಲಿದೆ.ವಿದ್ಯಾರ್ಥಿಗಳು ಸಂವಿಧಾನದ 8ನೇ ಅನುಸೂಚಿಯಲ್ಲಿರುವ ಯಾವುದೇ ಭಾರತೀಯ ಭಾಷೆಯನ್ನು ಮೂರನೇ ಭಾಷೆಯಾಗಿ ಆಯ್ಕೆ ಮಾಡಿಕೊಳ್ಳಬಹುದು.
ಈ ಶೈಕ್ಷಣಿಕ ವರ್ಷದಿಂದಲೇ ಪ್ರಕ್ರಿಯೆ ಆರಂಭಿಸುವಂತೆ ಶಾಲೆಗಳಿಗೆ ಸೂಚಿಸಲಾಗಿದೆ.
ಮೂರನೇ ಭಾಷೆಯನ್ನು ಬೋಧಿಸಲು ಅಗತ್ಯವಿರುವ ಶಿಕ್ಷಕರ ನೇಮಕಾತಿ ಮತ್ತು ಪಠ್ಯಪುಸ್ತಕಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವಂತೆ ಸಿಬಿಎಸ್‌ಇ ಶಾಲೆಗಳ ಮುಖ್ಯಸ್ಥರಿಗೆ ನಿರ್ದೇಶನ ನೀಡಿದೆ. ಈ ಹಿಂದೆ ಕೆಲವು ಶಾಲೆಗಳಲ್ಲಿ ಮೂರನೇ ಭಾಷೆಯ ಕಲಿಕೆ ಕೇವಲ ಆಯ್ಕೆಯಾಗಿತ್ತು, ಆದರೆ ಈಗ ಅದು ಪಠ್ಯಕ್ರಮದ ಅವಿಭಾಜ್ಯ ಅಂಗವಾಗಲಿದೆ.








