ಮಾಸ್ಕೋ: ಕಳೆದ ನಾಲ್ಕು ವರ್ಷಗಳಿಂದ ನಡೆಯುತ್ತಿರುವ ರಷ್ಯಾ-ಉಕ್ರೇನ್ ಸಂಘರ್ಷದಲ್ಲಿ ಇದೀಗ ಸಣ್ಣದೊಂದು ಆಶಾದಾಯಕ ಬೆಳವಣಿಗೆ ಕಂಡುಬಂದಿದೆ. ಆರ್ಥೊಡಾಕ್ಸ್ ಈಸ್ಟರ್ ಹಬ್ಬದ ನಿಮಿತ್ತ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಉಕ್ರೇನ್ ವಿರುದ್ಧದ ಯುದ್ಧದಲ್ಲಿ 32 ಗಂಟೆಗಳ ಅವಧಿಯ ತಾತ್ಕಾಲಿಕ ಕದನ ವಿರಾಮವನ್ನು ಘೋಷಿಸಿದ್ದಾರೆ.
ಕ್ರೆಮ್ಲಿನ್ ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆಯ ಪ್ರಕಾರ, ಈ ಕದನ ವಿರಾಮವು ಏಪ್ರಿಲ್ 11ರ ಶನಿವಾರ ಸಂಜೆ 4:00 ಗಂಟೆಯಿಂದ (ಸ್ಥಳೀಯ ಕಾಲಮಾನ) ಏಪ್ರಿಲ್ 12ರ ಭಾನುವಾರ ಮಧ್ಯರಾತ್ರಿಯವರೆಗೆ ಜಾರಿಯಲ್ಲಿರುತ್ತದೆ. ಆರ್ಥೊಡಾಕ್ಸ್ ಕ್ರೈಸ್ತರು ಆಚರಿಸುವ ಪವಿತ್ರ ಈಸ್ಟರ್ ಹಬ್ಬದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ರಷ್ಯಾ ಈ ಕದನ ವಿರಾಮವನ್ನು ಘೋಷಿಸಿದ್ದರೂ, ತನ್ನ ಪಡೆಗಳಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದೆ. “ಎಲ್ಲಾ ದಿಕ್ಕುಗಳಲ್ಲಿ ಕಾರ್ಯಾಚರಣೆ ನಿಲ್ಲಿಸಲು ಆದೇಶಿಸಲಾಗಿದೆ. ಆದರೆ ಶತ್ರು ಪಡೆಯಿಂದ ಯಾವುದೇ ಪ್ರಚೋದನೆ ಅಥವಾ ಆಕ್ರಮಣಕಾರಿ ಕ್ರಮಗಳು ಎದುರಾದರೆ ಅದನ್ನು ಹಿಮ್ಮೆಟ್ಟಿಸಲು ಸಿದ್ಧರಾಗಿರಬೇಕು” ಎಂದು ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸಿದೆ.
ಈ ಮೊದಲು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಹಬ್ಬದ ಸಂದರ್ಭದಲ್ಲಿ ಕದನ ವಿರಾಮಕ್ಕೆ ಪ್ರಸ್ತಾವನೆ ಇಟ್ಟಿದ್ದರು. ಇದೀಗ ರಷ್ಯಾದ ಘೋಷಣೆಗೆ ಪ್ರತಿಕ್ರಿಯಿಸಿರುವ ಉಕ್ರೇನ್, “ನಾವು ಈ ಹಿಂದೆಯೇ ಕದನ ವಿರಾಮಕ್ಕೆ ಸಿದ್ಧರಿದ್ದೇವೆ ಎಂದು ಹೇಳಿದ್ದೇವೆ, ಅದರಂತೆ ನಡೆದುಕೊಳ್ಳುತ್ತೇವೆ. ಜನರಿಗೆ ಭೀತಿಯಿಲ್ಲದ ಈಸ್ಟರ್ ಆಚರಿಸಲು ಅವಕಾಶ ಸಿಗಬೇಕು” ಎಂದು ಆಶಯ ವ್ಯಕ್ತಪಡಿಸಿದೆ.








