ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾದ ದಿನದಂದೇ ನಗರದ ಹೆಬ್ಬಾಳದಲ್ಲಿ ವಿದ್ಯಾರ್ಥಿನಿಯೊಬ್ಬಳು ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಹೆಬ್ಬಾಳದ ಮನೋರಾಯನಪಾಳ್ಯದ ನಿವಾಸಿ ತನುಶ್ರೀ (18) ಮೃತಪಟ್ಟ ದುರ್ದೈವಿ.
ಘಟನೆಯ ಹಿನ್ನೆಲೆ:
ನಿನ್ನೆ ಮಧ್ಯಾಹ್ನ ಸುಮಾರು 3 ಗಂಟೆಯ ವೇಳೆಗೆ ತನುಶ್ರೀ ತನ್ನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಪಿಯುಸಿ ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಮನನೊಂದು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪ್ರಾಥಮಿಕ ಮಾಹಿತಿಯಲ್ಲಿ ಹೇಳಲಾಗಿತ್ತು. ಸದ್ಯ ಮೃತದೇಹವನ್ನು ಕೆ.ಜಿ. ಹಳ್ಳಿಯಲ್ಲಿರುವ ಅಂಬೇಡ್ಕರ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಇರಿಸಲಾಗಿದೆ.
ತಾಯಿಯ ನಡೆ ಬಗ್ಗೆ ಮೂಡಿದ ಅನುಮಾನ:
ಈ ಪ್ರಕರಣದಲ್ಲಿ ತಾಯಿ ಆಶಾ ಅವರ ನಡೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಘಟನೆ ನಡೆದು ಸುಮಾರು 8 ಗಂಟೆಗಳ ಕಾಲ ಪೊಲೀಸರಿಗೆ ಯಾವುದೇ ಮಾಹಿತಿ ನೀಡದೆ ಇರುವುದು ಸಂಶಯಕ್ಕೆ ಕಾರಣವಾಗಿದೆ.
ಮಧ್ಯಾಹ್ನ 3 ಗಂಟೆಗೆ ಘಟನೆ ನಡೆದಿದ್ದರೂ, ತಾಯಿ ಆಶಾ ರಾತ್ರಿ 10 ಗಂಟೆಯ ನಂತರವಷ್ಟೇ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಪೊಲೀಸರು ಬರುವ ಮುನ್ನವೇ 4-5 ಯುವಕರ ಸಹಾಯದಿಂದ ಮೃತದೇಹವನ್ನು ನೇಣಿನಿಂದ ಕೆಳಗಿಳಿಸಿದ್ದಾರೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.
ಕೊಲೆ ಶಂಕೆ ವ್ಯಕ್ತಪಡಿಸಿದ ಸಂಬಂಧಿಕರು:
“ತಾಯಿಯೇ ಮಗಳನ್ನು ಕೊಲೆ ಮಾಡಿ ನಂತರ ನೇಣು ಹಾಕಿದ್ದಾಳೆ” ಎಂದು ತನುಶ್ರೀಯ ಸಂಬಂಧಿಕರು ಗಂಭೀರ ಆರೋಪ ಮಾಡಿದ್ದಾರೆ. ಪೊಲೀಸರಿಗೆ ಮಾಹಿತಿ ನೀಡದೆ ಮೃತದೇಹ ಇಳಿಸಿರುವುದು ಈ ಸಂಶಯವನ್ನು ಬಲಪಡಿಸಿದೆ ಎನ್ನಲಾಗಿದೆ.ಘಟನೆ ಸಂಬಂಧ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








