ಬೆಂಗಳೂರು: ಈ ತಿಂಗಳ 11ರಂದು ನಗರದಲ್ಲಿ ನಡೆಯಲಿರುವ ಜೆಡಿಎಸ್ ಪಕ್ಷದ ಗ್ರೇಟರ್ ಬೆಂಗಳೂರು ಸಮಾವೇಶವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಗ್ರೇಟರ್ ಬೆಂಗಳೂರು ಜೆಡಿಎಸ್ ಅಧ್ಯಕ್ಷ ಹೆಚ್.ಎಂ. ರಮೇಶ್ ಗೌಡ ಅವರು ಪಕ್ಷದ ರಾಜ್ಯ ಕಚೇರಿಯಲ್ಲಿ ಮಹಿಳಾ ಮುಖಂಡರು ಮತ್ತು ನಾಯಕರ ಮಹತ್ವದ ಸಭೆ ನಡೆಸಿದರು.
ಅಲ್ಲದೆ ಗ್ರೇಟರ್ ಬೆಂಗಳೂರು ಚುನಾವಣೆಗೆ ಕಾರ್ಯಕರ್ತರು ಮತ್ತು ಮುಖಂಡರನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಕೂಡ ಸಭೆಯಲ್ಲಿ ಸಮಲೋಚನೆ ನಡೆಸಲಾಯಿತು. ಹೆಚ್ಚು ಪ್ರಮಾಣದಲ್ಲಿ ಮಹಿಳೆಯರು ಸಮಾವೇಶದಲ್ಲಿ ಪಾಲ್ಗೊಳ್ಳುವ ಬಗ್ಗೆ ನಾಯಕಿಯರ ಜೊತೆ ಚರ್ಚೆ ನಡೆಸಲಾಯಿತು ಎಂದು ಅವರು ಮಾಧ್ಯಮಗಳಿಗೆ ತಿಳಿಸಿದರು.
ಕೊಮ್ಮಘಟ್ಟದ ನೈಸ್ ಗ್ರೌಂಡ್ ನಲ್ಲಿ ನಡೆಯಲಿರುವ ಈ ಸಮಾವೇಶದಲ್ಲಿ ಪಕ್ಷದ ಮಹಿಳಾ ಕಾರ್ಯಕರ್ತರು ಮತ್ತು ನಾಯಕಿಯರು ದೊಡ್ಡ ಪ್ರಮಾಣದಲ್ಲಿ ಪಾಲ್ಗೊಳ್ಳಬೇಕು. ಸಮಾವೇಶದ ಯಶಸ್ವಿಗೆ ಎಲ್ಲರೂ ಒಮ್ಮತ ಮತ್ತು ಒಗ್ಗಟ್ಟಿನಿಂದ ದುಡಿಮೆ ಮಾಡಬೇಕು ಎಂದು ಸಭೆಯಲ್ಲಿ ಅವರು ಕರೆ ನೀಡಿದರು.
ಸಮಾವೇಶದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ. ದೇವೇಗೌಡರು, ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಹಾಗೂ ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರು ಪಾಲ್ಗೊಳದಿದ್ದಾರೆ. ಬೆಂಗಳೂರು ನಗರದಲ್ಲಿ ಗ್ರೇಟರ್ ಬೆಂಗಳೂರು ರಚನೆಯಾಗಿ ಐದು ಇದು ಪಾಲಿಕೆಗಳು ಅಸ್ತಿತ್ವಕ್ಕೆ ಬಂದ ನಂತರ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಲಾಗಿದೆ. ಮುಂದಿನ ದಿನಗಳಲ್ಲಿ ಕೂಡ ಪಕ್ಷ ಬಲವರ್ಧನೆಗೆ ಆಧ್ಯತೆ ಕೊಡಬೇಕು. ಅತಿ ಮುಖ್ಯವಾಗಿ ಬೂತ್ ಮತ್ತು ವಾರ್ಡ್ ಮಟ್ಟದಲ್ಲಿ ಮಹಿಳಾ ಕಾರ್ಯಕರ್ತರು ಸಕ್ರಿಯವಾಗಿ ಕೆಲಸ ಮಾಡಬೇಕು ಎಂದು ಅವರು ಸಭೆಯಲ್ಲಿ ಒತ್ತಿ ಹೇಳಿದರು.
ಮುಂದಿನ ಗ್ರೇಟರ್ ಬೆಂಗಳೂರು ಚುನಾವಣೆಯ ದೃಷ್ಟಿಯಿಂದ ಪಕ್ಷದ ಸಮಾವೇಶವೂ ಅತ್ಯಂತ ಮಹತ್ವ ಪಡೆದುಕೊಂಡಿದೆ. ನಗರದ ಎಲ್ಲಾ 28 ವಿಧಾನಸಭೆ ಕ್ಷೇತ್ರಗಳಿಂದ ಮಹಿಳಾ ಕಾರ್ಯಕರ್ತರು ಸಮಾವೇಶದಲ್ಲಿ ಪಾಲ್ಗೊಳ್ಳಬೇಕು. ಅಲ್ಲದೆ ರಾಜ್ಯ ಕಾಂಗ್ರೆಸ್ ಸರ್ಕಾರ ಬೆಂಗಳೂರಿನ ವಿಚಾರದಲ್ಲಿ ನಡೆಸುತ್ತಿರುವ ಅಕ್ರಮ ಮತ್ತು ಅನಾಚಾರಗಳ ಬಗ್ಗೆ ಜನತೆಗೆ ಮನವರಿಕೆ ಮಾಡಿಕೊಡಬೇಕು. ಹಾಗೂ ಕರಪತ್ರಗಳನ್ನು ಹಿಡಿದು ಮನೆಮನೆಗೂ ತೆರಳಿ ಸರ್ಕಾರ ವಿರುದ್ಧ ಜಾಗೃತಿ ಮೂಡಿಸಬೇಕು ಎಂದು ರಮೇಶ್ ಗೌಡರು ಹೇಳಿದರು.
ಈ ಸಭೆಯಲ್ಲಿ ಪಕ್ಷದ ರಾಜ್ಯ ಕೋರ್ ಕಮಿಟಿ ಅಧ್ಯಕ್ಷರಾದ ಎಂ. ಕೃಷ್ಣಾರೆಡ್ಡಿ, ಮಾಜಿ ಶಾಸಕರು ಹಾಗೂ ಬೆಂಗಳೂರು ಉತ್ತರ ಜಿಲ್ಲಾ ಅಧ್ಯಕ್ಷ ಇ.ಕೃಷ್ಣಪ್ಪ, ಮಾಜಿ ಸಚಿವರಾದ ಲೀಲಾದೇವಿ ಆರ್ ಪ್ರಸಾದ್, ಗ್ರೇಟರ್ ಬೆಂಗಳೂರು ಮಹಿಳಾ ಅಧ್ಯಕ್ಷೆ ಶೈಲಾ ಸಂತೋಜಿ ರಾವ್, ಬೆಂಗಳೂರು ದಕ್ಷಿಣ ಜಿಲ್ಲಾ ಅಧ್ಯಕ್ಷ ಎಚ್.ಸಿ. ಕೃಷ್ಣ, ಬೆಂಗಳೂರು ಪೂರ್ವ ಜಿಲ್ಲಾ ಅಧ್ಯಕ್ಷ ನಟರಾಜ್ ಗಂಗಾಧರ್, ನಗರ ಮಹಾ ಪ್ರಧಾನ ಕಾರ್ಯದರ್ಶಿ ಎಸ್.ರಮೇಶ, ಬೆಂಗಳೂರು ಉತ್ತರ ವಿಭಾಗದ ಮಹಿಳಾ ಅಧ್ಯಕ್ಷೆ ಎಂ. ಕವಿತಾ ರೆಡ್ಡಿ, ಬೆಂಗಳೂರು ಪಶ್ಚಿಮ ವಿಭಾಗದ ಮಹಿಳಾ ಅಧ್ಯಕ್ಷೆ ಮಂಗಳಮ್ಮ, ಬೆಂಗಳೂರು ಪೂರ್ವ ಮಹಿಳಾ ಅಧ್ಯಕ್ಷೆ ಮಲ್ಲೇಶ್ವರಿ ಸೇರಿದಂತೆ ವಿಧಾನಸಭಾ ಕ್ಷೇತ್ರ ಅಧ್ಯಕ್ಷರು, ಮಹಿಳಾ ವಿಭಾಗದ ಪದಾಧಿಕಾರಿಗಳು, ವಿಭಾಗಗಳ ಅಧ್ಯಕ್ಷರು, ವಾರ್ಡ್ ಅಧ್ಯಕ್ಷರು ಮತ್ತು ಇನ್ನಿತರ ಮುಖಂಡರು ಸೇರಿದಂತೆ ಮಹಿಳಾ ಕಾರ್ಯಕರ್ತೆಯರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.








