ಜೆರುಸಲೆಮ್:ಅಮೆರಿಕ ಮತ್ತು ಇರಾನ್ ನಡುವೆ ಏರ್ಪಟ್ಟಿರುವ ಕದನ ವಿರಾಮದಿಂದಾಗಿ ಇಸ್ರೇಲ್ನಲ್ಲಿ ಹೇರಲಾಗಿದ್ದ ತುರ್ತು ಪರಿಸ್ಥಿತಿಯನ್ನು ಹಿಂತೆಗೆದುಕೊಳ್ಳಲಾಗಿದೆ. ಇದರ ಬೆನ್ನಲ್ಲೇ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ವಿರುದ್ಧದ ಬಹುಕಾಲದ ಭ್ರಷ್ಟಾಚಾರದ ಪ್ರಕರಣಗಳ (Corruption Trial) ವಿಚಾರಣೆಯನ್ನು ಮುಂಬರುವ ಭಾನುವಾರದಿಂದ ಪುನರಾರಂಭಿಸುವುದಾಗಿ ನ್ಯಾಯಾಲಯ ಘೋಷಿಸಿದೆ.
ಇರಾನ್ ಮತ್ತು ಇಸ್ರೇಲ್ ನಡುವಿನ ನೇರ ಸಂಘರ್ಷದ ಕಾರಣದಿಂದ ಇಸ್ರೇಲ್ನಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಕಲಾಪಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಈಗ ಪರಿಸ್ಥಿತಿ ಸುಧಾರಿಸಿರುವುದರಿಂದ ವಿಚಾರಣೆ ಮತ್ತೆ ಹಳಿಗೆ ಬಂದಿದೆ.
ಭಾನುವಾರದಿಂದ ಬುಧವಾರದವರೆಗೆ ವಾರದಲ್ಲಿ ನಾಲ್ಕು ದಿನಗಳ ಕಾಲ ನೆತನ್ಯಾಹು ನ್ಯಾಯಾಲಯಕ್ಕೆ ಹಾಜರಾಗಬೇಕಿದೆ. ಇದು ಪ್ರಧಾನಿ ಕಾರ್ಯಕಲಾಪಗಳ ಮೇಲೆ ಪ್ರಭಾವ ಬೀರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ನೆತನ್ಯಾಹು ವಿರುದ್ಧ ಲಂಚ ಸ್ವೀಕಾರ (Bribery), ವಂಚನೆ (Fraud) ಮತ್ತು ಅಧಿಕಾರ ದುರುಪಯೋಗಕ್ಕೆ ಸಂಬಂಧಿಸಿದಂತೆ 2019ರಲ್ಲೇ ಪ್ರಕರಣ ದಾಖಲಾಗಿತ್ತು. ಇಸ್ರೇಲ್ ಇತಿಹಾಸದಲ್ಲಿ ಅಧಿಕಾರದಲ್ಲಿರುವಾಗಲೇ ಭ್ರಷ್ಟಾಚಾರದ ವಿಚಾರಣೆ ಎದುರಿಸುತ್ತಿರುವ ಮೊದಲ ಪ್ರಧಾನಿ ಇವರಾಗಿದ್ದಾರೆ.








