ಬೆಂಗಳೂರು: ಇಂದಿನ ಓಡಾಟದ ಜೀವನಶೈಲಿಯಲ್ಲಿ ನೆಮ್ಮದಿಯ ನಿದ್ರೆ ಎಂಬುದು ಮರೀಚಿಕೆಯಾಗುತ್ತಿದೆ. ನಾವು ಹಗಲಿನಲ್ಲಿ ಎಷ್ಟು ಕಾರ್ಯನಿರತರಾಗಿರುತ್ತೇವೆಯೋ, ಅಷ್ಟೇ ಪ್ರಾಮುಖ್ಯತೆಯನ್ನು ರಾತ್ರಿಯ ನಿದ್ರೆಗೂ ನೀಡಬೇಕಾಗುತ್ತದೆ. ಆದರೆ, ಕೇವಲ ಕೆಲಸದ ಒತ್ತಡವಷ್ಟೇ ಅಲ್ಲ, ನಾವು ರಾತ್ರಿ ಸೇವಿಸುವ ಆಹಾರವೂ ನಮ್ಮ ನಿದ್ರೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಇತ್ತೀಚಿನ ಅಧ್ಯಯನಗಳು ಎಚ್ಚರಿಸಿವೆ.
ಸರಿಯಾಗಿ ನಿದ್ರೆ ಮಾಡದಿದ್ದರೆ ಮರುದಿನ ಜಂಕ್ ಫುಡ್ ತಿನ್ನುವ ಬಯಕೆ ಹೆಚ್ಚಾಗುತ್ತದೆ, ಇದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಹಾಗಾದರೆ, ಉತ್ತಮ ನಿದ್ರೆಗಾಗಿ ಮಲಗುವ ಮುನ್ನ ಯಾವೆಲ್ಲಾ ಆಹಾರಗಳನ್ನು ತ್ಯಜಿಸಬೇಕು? ಇಲ್ಲಿದೆ ಮಾಹಿತಿ.
1. ಕೆಫೀನ್ ಮತ್ತು ಚಾಕೊಲೇಟ್ ಹಾವಳಿ
ಕಾಫಿ, ಟೀ ಮತ್ತು ಎನರ್ಜಿ ಡ್ರಿಂಕ್ಸ್‌ಗಳಲ್ಲಿರುವ ಕೆಫೀನ್ ಅಂಶವು ಮೆದುಳನ್ನು ಸಕ್ರಿಯವಾಗಿರಿಸುತ್ತದೆ. ಇದು ನೀವು ಆಳವಾದ ನಿದ್ರೆಗೆ ಜಾರುವುದನ್ನು ತಡೆಯುತ್ತದೆ. ಇನ್ನು ಚಾಕೊಲೇಟ್, ವಿಶೇಷವಾಗಿ ಡಾರ್ಕ್ ಚಾಕೊಲೇಟ್‌ನಲ್ಲಿ ಕೆಫೀನ್ ಮತ್ತು ಸಕ್ಕರೆ ಎರಡೂ ಇರುವುದರಿಂದ ಇದು ನಿದ್ರಾಹೀನತೆಗೆ ಪ್ರಮುಖ ಕಾರಣವಾಗಬಹುದು.
2. ಮಸಾಲೆಯುಕ್ತ ಮತ್ತು ಎಣ್ಣೆ ಪದಾರ್ಥಗಳು
ರಾತ್ರಿ ಹೊತ್ತು ಅತಿಯಾದ ಮಸಾಲೆ ಅಥವಾ ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು (ಪನೀರ್, ಚೋಲೆ-ಭಾತುರೆ, ಪಿಜ್ಜಾ, ಬರ್ಗರ್) ಸೇವಿಸುವುದರಿಂದ ಆಮ್ಲೀಯತೆ (Acidity) ಮತ್ತು ಎದೆಯುರಿ ಕಾಣಿಸಿಕೊಳ್ಳಬಹುದು. ಮಟನ್ ಮತ್ತು ಹಂದಿಮಾಂಸದಂತಹ ಹೆಚ್ಚಿನ ಕೊಬ್ಬಿನಾಂಶವಿರುವ ಆಹಾರಗಳು ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದರಿಂದ ದೇಹವು ವಿಶ್ರಾಂತಿ ಪಡೆಯಲು ಸಾಧ್ಯವಾಗುವುದಿಲ್ಲ.
3. ತರಕಾರಿ ಮತ್ತು ಹಣ್ಣುಗಳ ಆಯ್ಕೆಯಲ್ಲೂ ಇರಲಿ ಎಚ್ಚರ
ಆರೋಗ್ಯಕ್ಕೆ ಒಳ್ಳೆಯದೆಂದು ನಂಬಲಾದ ಕಲ್ಲಂಗಡಿ ಮತ್ತು ಸೌತೆಕಾಯಿಯನ್ನು ರಾತ್ರಿ ಸೇವಿಸಬೇಡಿ. ಇವುಗಳಲ್ಲಿ ನೀರಿನಂಶ ಹೆಚ್ಚಿರುವುದರಿಂದ ರಾತ್ರಿ ಪದೇ ಪದೇ ಮೂತ್ರ ವಿಸರ್ಜನೆಗೆ ಏಳಬೇಕಾಗಬಹುದು. ಹಾಗೆಯೇ ಬ್ರೋಕೋಲಿ, ಹೂಕೋಸು ಮತ್ತು ಎಲೆಕೋಸುಗಳಂತಹ ತರಕಾರಿಗಳು ಹೊಟ್ಟೆಯಲ್ಲಿ ಅನಿಲ (Gas) ಉತ್ಪತ್ತಿ ಮಾಡಿ ನಿದ್ರೆಗೆ ಅಡ್ಡಿಪಡಿಸುತ್ತವೆ.
4. ಸಕ್ಕರೆ ಮತ್ತು ಆಮ್ಲೀಯ ಆಹಾರಗಳು
ಕೇಕ್, ಪೇಸ್ಟ್ರಿ ಮತ್ತು ಸಿಹಿ ತಿಂಡಿಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಏರುಪೇರು ಮಾಡುತ್ತವೆ. ಟೊಮೆಟೊ, ನಿಂಬೆ ಮತ್ತು ಕಿತ್ತಳೆಯಂತಹ ಆಮ್ಲೀಯ ಪದಾರ್ಥಗಳು ರಾತ್ರಿ ಹೊತ್ತು ಎದೆಯಲ್ಲಿ ಭಾರವಾದ ಭಾವನೆ ಉಂಟುಮಾಡಬಹುದು.
5. ಮದ್ಯಪಾನದ ತಪ್ಪು ಕಲ್ಪನೆ
ಅನೇಕರು ಮದ್ಯಪಾನ ಮಾಡಿದರೆ ಚೆನ್ನಾಗಿ ನಿದ್ರೆ ಬರುತ್ತದೆ ಎಂದು ಭಾವಿಸುತ್ತಾರೆ. ಆದರೆ ವಾಸ್ತವದಲ್ಲಿ ಮದ್ಯವು ನಿದ್ರೆಯ ನೈಸರ್ಗಿಕ ಚಕ್ರವನ್ನು ಅಡ್ಡಿಪಡಿಸುತ್ತದೆ. ಇದು ಮಧ್ಯರಾತ್ರಿಯಲ್ಲಿ ಬಾಯಾರಿಕೆ ಅಥವಾ ಅಸ್ವಸ್ಥತೆ ಉಂಟುಮಾಡಿ ನಿದ್ರೆಯನ್ನು ಕೆಡಿಸುತ್ತದೆ.
ತಜ್ಞರ ಸಲಹೆ: ರಾತ್ರಿ ನಿದ್ರೆ ಸುಗಮವಾಗಿರಬೇಕೆಂದರೆ ಮಲಗುವ ಕನಿಷ್ಠ 2-3 ಗಂಟೆಗಳ ಮೊದಲೇ ಹಗುರವಾದ ಆಹಾರ ಸೇವಿಸುವುದು ಉತ್ತಮ. ಸರಿಯಾದ ಆಹಾರ ಆಯ್ಕೆಯು ಕೇವಲ ಉತ್ತಮ ನಿದ್ರೆಯನ್ನಷ್ಟೇ ಅಲ್ಲದೆ, ನಿಮ್ಮ ದಿನವಿಡೀ ಚೈತನ್ಯದಿಂದ ಇರುವಂತೆ ಮಾಡುತ್ತದೆ.








