ಬೆಂಗಳೂರು: ಕರ್ನಾಟಕ ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಮಹತ್ವದ ನಿರ್ಧಾರ ಕೈಗೊಂಡಿದೆ. ಏಪ್ರಿಲ್ 9, 2026ರ ಗುರುವಾರದಂದು ಮತದಾನ ನಡೆಯಲಿರುವ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಅರ್ಹ ಮತದಾರರಿಗೆ ಅನುಕೂಲವಾಗುವಂತೆ ಸಂಬಳ ಸಹಿತ ರಜೆ (Paid Holiday) ಘೋಷಿಸಿ ಆದೇಶ ಹೊರಡಿಸಲಾಗಿದೆ.
ಯಾವ ಕ್ಷೇತ್ರಗಳಲ್ಲಿ ರಜೆ?
ಈ ಕೆಳಗಿನ ಎರಡು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ರಜೆ ಅನ್ವಯವಾಗಲಿದೆ:
24-ಬಾಗಲಕೋಟೆ ವಿಧಾನಸಭಾ ಕ್ಷೇತ್ರ.
107-ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ.
ಯಾರಿಗೆಲ್ಲಾ ರಜೆ ಅನ್ವಯಿಸುತ್ತದೆ?
ಚುನಾವಣಾ ಆಯೋಗದ ನಿರ್ದೇಶನದಂತೆ ಈ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುವ:
ಎಲ್ಲಾ ರಾಜ್ಯ ಸರ್ಕಾರಿ ಕಚೇರಿಗಳು.
ಶಾಲಾ-ಕಾಲೇಜುಗಳು (ಅನುದಾನಿತ ಶಿಕ್ಷಣ ಸಂಸ್ಥೆಗಳೂ ಸೇರಿ).
ರಾಷ್ಟ್ರೀಕೃತ ಬ್ಯಾಂಕುಗಳು ಹಾಗೂ ಜೀವ ವಿಮಾ ನಿಗಮಗಳು (LIC).
ಎಲ್ಲಾ ಹಣಕಾಸು ಸಂಸ್ಥೆಗಳು.
ವ್ಯಾಪಾರ, ಕೈಗಾರಿಕಾ ಸಂಸ್ಥೆಗಳು ಅಥವಾ ಇನ್ನಿತರೆ ಯಾವುದೇ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವ ಅರ್ಹ ಮತದಾರರಿಗೆ ಈ ರಜೆ ಅನ್ವಯಿಸುತ್ತದೆ.
ಕಾನೂನು ಕ್ರಮದ ಎಚ್ಚರಿಕೆ
ಸರ್ಕಾರದ ಈ ಆದೇಶವು ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ 1881 ಹಾಗೂ ಜನಪ್ರತಿನಿಧಿ ಕಾಯ್ದೆ 1951ರ ಅಡಿಯಲ್ಲಿ ಹೊರಡಿಸಲಾಗಿದೆ. ಮತದಾನ ಮಾಡುವುದು ಪ್ರತಿಯೊಬ್ಬ ನಾಗರಿಕನ ಹಕ್ಕಾಗಿದ್ದು, ಅದಕ್ಕೆ ಅಡ್ಡಿಯಾಗದಂತೆ ಎಲ್ಲಾ ಅರ್ಹ ಮತದಾರರಿಗೂ ವೇತನ ಸಹಿತ ರಜೆ ನೀಡುವುದು ಕಡ್ಡಾಯವಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ಈ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸೂಚಿಸಲಾಗಿದೆ.









