ತಿರುವನಂತಪುರಂ: ಕೇರಳ ವಿಧಾನಸಭಾ ಚುನಾವಣೆಗೆ ಕೇವಲ 48 ಗಂಟೆಗಳು ಬಾಕಿ ಇರುವ ಬೆನ್ನಲ್ಲೇ, ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದ 2018ರ ತೀರ್ಪಿನ ಮರುಪರಿಶೀಲನಾ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಇಂದು (ಏಪ್ರಿಲ್ 7, 2026) ಆರಂಭಿಸಲಿದೆ. ಚುನಾವಣೆಯ ಹೊತ್ತಿನಲ್ಲೇ ನಡೆಯುತ್ತಿರುವ ಈ ಕಾನೂನು ಪ್ರಕ್ರಿಯೆಯು ಕೇರಳ ರಾಜಕೀಯ ವಲಯದಲ್ಲಿ ಭಾರಿ ಕುತೂಹಲ ಮೂಡಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಒಂಬತ್ತು ನ್ಯಾಯಮೂರ್ತಿಗಳ ಬೃಹತ್ ಸಂವಿಧಾನ ಪೀಠವು ಈ ಅರ್ಜಿಗಳ ವಿಚಾರಣೆ ನಡೆಸಲಿದೆ. ಧಾರ್ಮಿಕ ಆಚರಣೆಗಳಲ್ಲಿ ನ್ಯಾಯಾಲಯದ ಹಸ್ತಕ್ಷೇಪದ ಮಿತಿಯ ಬಗ್ಗೆ ಈ ಪೀಠವು ಚರ್ಚಿಸಲಿದೆ.ಕೇರಳದಲ್ಲಿ ಏಪ್ರಿಲ್ 9 ರಂದು ವಿಧಾನಸಭಾ ಚುನಾವಣೆ ನಡೆಯಲಿದ್ದು, ಈ ಸಮಯದಲ್ಲಿ ಶಬರಿಮಲೆ ವಿಷಯ ಮುನ್ನೆಲೆಗೆ ಬಂದಿರುವುದು ರಾಜಕೀಯ ಪಕ್ಷಗಳಲ್ಲಿ ಸಂಚಲನ ಮೂಡಿಸಿದೆ. ಮತದಾನದ ಮೇಲೆ ಇದು ಪ್ರಭಾವ ಬೀರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಕೇಂದ್ರ ಸರ್ಕಾರವು ಧಾರ್ಮಿಕ ಸಂಪ್ರದಾಯಗಳನ್ನು ಎತ್ತಿಹಿಡಿಯುವ ಪರವಾಗಿ ವಾದ ಮಂಡಿಸುವ ಸಾಧ್ಯತೆಯಿದೆ. ಇತ್ತ ಕೇರಳ ಸರ್ಕಾರವು “ಧಾರ್ಮಿಕ ವಿದ್ವಾಂಸರ ಅಭಿಪ್ರಾಯ ಪಡೆಯುವುದು ಸೂಕ್ತ” ಎಂಬ ಮೃದು ನಿಲುವನ್ನು ಅಫಿಡವಿಟ್ನಲ್ಲಿ ವ್ಯಕ್ತಪಡಿಸಿದೆ.








