ಚೆನ್ನೈ: ಭಾರತದ ನಾಗರಿಕ ಪರಮಾಣು ಇಂಧನ ಕಾರ್ಯಕ್ರಮದಲ್ಲಿ ಇಂದು ಅತ್ಯಂತ ಮಹತ್ವದ ದಿನ. ತಮಿಳುನಾಡಿನ ಕಲ್ಪಾಕ್ಕಂನಲ್ಲಿರುವ ದೇಶದ ಮೊದಲ ಸ್ವದೇಶಿ ನಿರ್ಮಿತ ಪ್ರೊಟೊಟೈಪ್ ಫಾಸ್ಟ್ ಬ್ರೀಡರ್ ರಿಯಾಕ್ಟರ್ (PFBR) ಯಶಸ್ವಿಯಾಗಿ ‘ಕ್ರಿಟಿಕಾಲಿಟಿ’ (Criticality) ಅಥವಾ ಸ್ಥಿರವಾದ ಪರಮಾಣು ಸರಣಿ ಕ್ರಿಯೆಯನ್ನು ತಲುಪಿದೆ. ಈ ಮೂಲಕ ಭಾರತವು ಪರಮಾಣು ತಂತ್ರಜ್ಞಾನದ ಎರಡನೇ ಹಂತಕ್ಕೆ ಅಧಿಕೃತವಾಗಿ ಲಗ್ಗೆ ಇಟ್ಟಿದೆ.
“ಇದು ಭಾರತದ ಪರಮಾಣು ಪ್ರಯಾಣದ ನಿರ್ಣಾಯಕ ಹಂತ,” ಎಂದು ಪ್ರಧಾನಿ ನರೇಂದ್ರ ಮೋದಿ ಅವರು ವಿಜ್ಞಾನಿಗಳನ್ನು ಶ್ಲಾಘಿಸಿದ್ದಾರೆ. ಈ ರಿಯಾಕ್ಟರ್ ತನ್ನ ಬಳಕೆಗಿಂತ ಹೆಚ್ಚಿನ ಇಂಧನವನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ಭಾರತದ ವೈಜ್ಞಾನಿಕ ಶಕ್ತಿಯ ಪ್ರತೀಕವಾಗಿದೆ ಎಂದು ಅವರು ಬಣ್ಣಿಸಿದ್ದಾರೆ.
ಪರಮಾಣು ರಿಯಾಕ್ಟರ್‌ನೊಳಗೆ ಇಂಧನವು ಸ್ಥಿರವಾದ ಮತ್ತು ನಿಯಂತ್ರಿತ ರೀತಿಯಲ್ಲಿ ಶಕ್ತಿಯನ್ನು ಬಿಡುಗಡೆ ಮಾಡಲು ಆರಂಭಿಸುವುದನ್ನು ‘ಕ್ರಿಟಿಕಾಲಿಟಿ’ ಎನ್ನಲಾಗುತ್ತದೆ. ಇದು ಪೂರ್ಣ ಪ್ರಮಾಣದ ವಿದ್ಯುತ್ ಉತ್ಪಾದನೆಗೆ ಮುನ್ನ ತಲುಪಬೇಕಾದ ಅತ್ಯಂತ ಪ್ರಮುಖ ಮೈಲಿಗಲ್ಲು.
ಈ ರಿಯಾಕ್ಟರ್ 500 ಮೆಗಾವ್ಯಾಟ್ (MWe) ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದು ಸಾಮಾನ್ಯ ರಿಯಾಕ್ಟರ್‌ಗಳಿಗಿಂತ ಭಿನ್ನವಾಗಿದ್ದು, ಇಂಧನವನ್ನು ಬಳಸುವುದರ ಜೊತೆಗೆ ಹೊಸ ಇಂಧನವನ್ನೂ (ಪ್ಲುಟೋನಿಯಂ) ಸೃಷ್ಟಿಸುತ್ತದೆ. ಆದ್ದರಿಂದಲೇ ಇದನ್ನು ‘ಬ್ರೀಡರ್’ (Breeder) ರಿಯಾಕ್ಟರ್ ಎನ್ನಲಾಗುತ್ತದೆ.








