ಬೆಂಗಳೂರು: ರಾಜ್ಯದಲ್ಲಿ ಆರ್ಥಿಕ ಪ್ರಗತಿ ಎಷ್ಟೇ ವೇಗವಾಗಿದ್ದರೂ, ಮಕ್ಕಳ ಆರೋಗ್ಯದ ವಿಷಯದಲ್ಲಿ ಕಳವಳಕಾರಿ ಸಂಗತಿಯೊಂದು ಬೆಳಕಿಗೆ ಬಂದಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಇತ್ತೀಚಿನ ವರದಿಯ ಪ್ರಕಾರ, ಕರ್ನಾಟಕದ 31 ಜಿಲ್ಲೆಗಳಲ್ಲಿ 6 ವರ್ಷದೊಳಗಿನ ಸುಮಾರು 4.25 ಲಕ್ಷ ಮಕ್ಕಳು ಕುಬ್ಜತೆಯಿಂದ (Stunting) ಬಳಲುತ್ತಿದ್ದಾರೆ.
ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಈ ಸಮಸ್ಯೆ ಅತ್ಯಂತ ಗಂಭೀರವಾಗಿದೆ. ಅಂಗನವಾಡಿ ಕೇಂದ್ರಗಳಿಗೆ ದಾಖಲಾದ 32.75 ಲಕ್ಷ ಮಕ್ಕಳ ಪೈಕಿ, ತಪಾಸಣೆಗೊಳಪಡಿಸಿದಾಗ 4,25,827 ಮಕ್ಕಳಲ್ಲಿ ಪೂರ್ಣ ಕುಬ್ಜತೆ ಹಾಗೂ 5,52,606 ಮಕ್ಕಳಲ್ಲಿ ಅರೆ ಕುಬ್ಜತೆ ಕಂಡುಬಂದಿದೆ.
ವಿಜಯಪುರ ಜಿಲ್ಲೆಯಲ್ಲಿ ಅತಿ ಹೆಚ್ಚು (45,660) ಕುಬ್ಜ ಮಕ್ಕಳು ಪತ್ತೆಯಾಗಿದ್ದಾರೆ. ನಂತರದ ಸ್ಥಾನಗಳಲ್ಲಿ ಕಲಬುರಗಿ, ಬೆಳಗಾವಿ ಮತ್ತು ರಾಯಚೂರು ಜಿಲ್ಲೆಗಳಿವೆ.ಕುಬ್ಜ ಮಕ್ಕಳ ಸಂಖ್ಯೆಯಲ್ಲಿ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದ್ದರೆ, ಜಾರ್ಖಂಡ್, ಅಸ್ಸಾಂ, ಮಧ್ಯಪ್ರದೇಶ, ತ್ರಿಪುರ ಮತ್ತು ಮಹಾರಾಷ್ಟ್ರದ ನಂತರದ ಸ್ಥಾನದಲ್ಲಿ ಕರ್ನಾಟಕವಿದೆ.
ಕುಬ್ಜತೆಗೆ ಕಾರಣಗಳೇನು?
ಇಲಾಖೆಯ ವರದಿಯು ಕುಬ್ಜತೆಗೆ ಮುಖ್ಯವಾಗಿ ನಾಲ್ಕು ಕಾರಣಗಳನ್ನು ಗುರುತಿಸಿದೆ:
ಸಾಮಾಜಿಕ ಮತ್ತು ಆರ್ಥಿಕ ಹಿನ್ನೆಲೆ.
ಆರೋಗ್ಯ ಮತ್ತು ಪೌಷ್ಟಿಕಾಂಶದ ಕೊರತೆ.
ಅನುವಂಶೀಯತೆ.
ಮೂಢನಂಬಿಕೆ: ಗ್ರಾಮೀಣ ಭಾಗದಲ್ಲಿ ಕುಬ್ಜತೆಯು ದೇವರ ಶಾಪ ಎಂಬ ತಪ್ಪು ಕಲ್ಪನೆ ಇಂದಿಗೂ ಮನೆಮಾಡಿದೆ.
ಕುಬ್ಜತೆಯನ್ನು ತಡೆಗಟ್ಟಲು ಸರ್ಕಾರವು ‘ಮಾತೃಪೂರ್ಣ’ ಮತ್ತು ‘ಚಿಗುರು’ ಯೋಜನೆಗಳ ಮೂಲಕ ವಾರದಲ್ಲಿ ಎರಡು ದಿನ ಮೊಟ್ಟೆ, ಹಾಲಿನ ಪೌಡರ್ ಹಾಗೂ ಪೂರಕ ಪೌಷ್ಟಿಕ ಆಹಾರವನ್ನು ನೀಡುತ್ತಿದೆ. ಆದರೆ, ಈ ಯೋಜನೆಗಳ ಅನುಷ್ಠಾನದಲ್ಲಿರುವ ಲೋಪದೋಷಗಳಿಂದಾಗಿ ಅನೇಕ ಮಕ್ಕಳು ಇನ್ನೂ ಈ ಸೌಲಭ್ಯಗಳಿಂದ ಹೊರಗುಳಿದಿದ್ದಾರೆ ಎಂದು ವರದಿ ತಿಳಿಸಿದೆ.
ತಜ್ಞರ ಸಲಹೆ: ಮಗು ಜನಿಸಿದ 1000 ದಿನಗಳ ಒಳಗೆ (ಅಂದರೆ 2 ವರ್ಷ ತುಂಬುವವರೆಗೆ) ಮಗುವಿಗೆ ಅಗತ್ಯವಾದ ಲಸಿಕೆ, ಪೌಷ್ಟಿಕ ಆಹಾರ ಮತ್ತು ಸರಿಯಾದ ವೈದ್ಯಕೀಯ ಆರೈಕೆ ನೀಡಿದರೆ ಕುಬ್ಜತೆಯ ಸಮಸ್ಯೆಯಿಂದ ಮಕ್ಕಳನ್ನು ರಕ್ಷಿಸಬಹುದು.
ಜಿಲ್ಲಾವಾರು ಕುಬ್ಜ ಮಕ್ಕಳ ವಿವರ: ಅತಿ ಹೆಚ್ಚು ಕುಬ್ಜ ಮಕ್ಕಳನ್ನು ಹೊಂದಿರುವ ಜಿಲ್ಲೆಗಳ ಪಟ್ಟಿ ಇಲ್ಲಿದೆ:








