ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ, ಮದ್ಯಪಾನ ಮಾಡಿದ ನಂತರ ಕೆಲವರು ಅತ್ಯಂತ ಆಕ್ರಮಣಕಾರಿಯಾಗಿ ವರ್ತಿಸುವುದು, ಸಣ್ಣ ವಿಷಯಕ್ಕೂ ಜಗಳವಾಡುವುದು ಏಕೆ ಎಂಬ ಪ್ರಶ್ನೆಗೆ ವಿಜ್ಞಾನಿಗಳು ಈಗ ಸ್ಪಷ್ಟ ಉತ್ತರ ನೀಡಿದ್ದಾರೆ. ಇದು ಕೇವಲ ವ್ಯಕ್ತಿಯ ಸ್ವಭಾವವಲ್ಲ, ಬದಲಿಗೆ ಮದ್ಯವು ಮೆದುಳಿನ ಮೇಲೆ ಮಾಡುವ ರಾಸಾಯನಿಕ ಪ್ರಭಾವ ಎಂದು ಸಂಶೋಧನೆಗಳು ತಿಳಿಸಿವೆ.
ವಿಜ್ಞಾನಿಗಳ ಪ್ರಕಾರ, ಮದ್ಯವು ಮೆದುಳಿನ ‘ಪ್ರೀಫ್ರಂಟಲ್ ಕಾರ್ಟೆಕ್ಸ್’ (Prefrontal Cortex) ಎಂಬ ಭಾಗದ ಮೇಲೆ ನೇರ ಪರಿಣಾಮ ಬೀರುತ್ತದೆ. ಮೆದುಳಿನ ಈ ಭಾಗವು ಮನುಷ್ಯನ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ, ಸಾಮಾಜಿಕ ನಡವಳಿಕೆ ಮತ್ತು ಆಲೋಚನೆಗಳನ್ನು ನಿಯಂತ್ರಿಸುತ್ತದೆ.
ಸಾಮಾನ್ಯ ಸ್ಥಿತಿಯಲ್ಲಿದ್ದಾಗ ನಮ್ಮ ಮೆದುಳು “ಇಲ್ಲಿ ಜಗಳವಾಡುವುದು ತಪ್ಪು” ಅಥವಾ “ಈ ಮಾತು ಬೇಡ” ಎಂದು ನಮಗೆ ಎಚ್ಚರಿಕೆ ನೀಡುತ್ತದೆ. ಆದರೆ ಮದ್ಯ ಸೇವಿಸಿದಾಗ ಈ ‘ಬ್ರೇಕ್’ ವ್ಯವಸ್ಥೆ ನಿಷ್ಕ್ರಿಯಗೊಳ್ಳುತ್ತದೆ. ಇದರಿಂದಾಗಿ ಮನಸ್ಸಿನಲ್ಲಿ ಬರುವ ಆಲೋಚನೆಗಳನ್ನು ತಡೆಯುವ ಶಕ್ತಿ ಮೆದುಳಿಗೆ ಇರುವುದಿಲ್ಲ.ಮದ್ಯಪಾನ ಮಾಡಿದ ವ್ಯಕ್ತಿಗೆ ಎದುರಿಗಿರುವವರ ಮುಖಭಾವ ಅಥವಾ ಮಾತಿನ ಅರ್ಥ ಸರಿಯಾಗಿ ತಿಳಿಯುವುದಿಲ್ಲ. ಯಾರೋ ಒಬ್ಬರು ತಮಾಷೆಗೆ ಆಡಿದ ಮಾತನ್ನೂ ಅವರು ತಮ್ಮ ಮೇಲೆ ನಡೆದ ‘ದಾಳಿ’ ಎಂದು ತಪ್ಪಾಗಿ ಭಾವಿಸುತ್ತಾರೆ. ಈ ತಪ್ಪು ಗ್ರಹಿಕೆಯೇ ಜಗಳಕ್ಕೆ ನಾಂದಿ ಹಾಡುತ್ತದೆ.
ಕುಡಿದ ಅಮಲಿನಲ್ಲಿ ಮನುಷ್ಯನಿಗೆ ಕೇವಲ ‘ಈ ಕ್ಷಣ’ ಮಾತ್ರ ಕಾಣಿಸುತ್ತದೆ. ಈಗ ನಾನು ಜಗಳವಾಡಿದರೆ ಮುಂದೆ ಏನಾಗಬಹುದು ಎಂಬ ದೂರದೃಷ್ಟಿ ಮೆದುಳಿಗೆ ಇರುವುದಿಲ್ಲ. ಇದನ್ನು ವಿಜ್ಞಾನಿಗಳು ‘ಆಲ್ಕೋಹಾಲ್ ಮೈಯೋಪಿಯಾ’ (Alcohol Myopia) ಎಂದು ಕರೆಯುತ್ತಾರೆ.
ಎಲ್ಲರೂ ಆಕ್ರಮಣಕಾರಿಯಾಗುತ್ತಾರೆಯೇ?
ಇಲ್ಲ, ಮದ್ಯಪಾನ ಮಾಡಿದ ಎಲ್ಲರೂ ಜಗಳವಾಡುವುದಿಲ್ಲ.
ಯಾರು ಜೀವನದಲ್ಲಿ ತಮ್ಮ ಕೋಪವನ್ನು ಹತ್ತಿಕ್ಕಿರುತ್ತಾರೋ, ಅಂತಹವರು ಮದ್ಯ ಸೇವಿಸಿದಾಗ ತಮ್ಮ ಮೇಲಿನ ನಿಯಂತ್ರಣ ಕಳೆದುಕೊಂಡು ಸ್ಫೋಟಗೊಳ್ಳುತ್ತಾರೆ.ಆ ಸಮಯದಲ್ಲಿ ಅವರ ಸುತ್ತಮುತ್ತಲಿರುವ ಜನರು ಮತ್ತು ಪರಿಸರ ಕೂಡ ಅವರ ವರ್ತನೆಯನ್ನು ನಿರ್ಧರಿಸುತ್ತದೆ.








