ಶಿವಮೊಗ್ಗ: ಕಷ್ಟಪಟ್ಟು ದುಡಿಯುವ ಕಾಯಕದ ನಡುವೆಯೂ ಸಮಾಜದ ಅಸಹಾಯಕರಿಗೆ ನೆರವಾಗುವ ಮೂಲಕ ಸಾಗರದ ಓಮಿನಿ ಚಾಲಕರು ಮತ್ತು ಮಾಲೀಕರ ಸಂಘವು ಎಲ್ಲರಿಗೂ ಮಾದರಿಯಾಗಿದೆ. ಶನಿವಾರ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಮುಗದೂರು ಬಳಿಯ ದೇವಸ್ಥಳದಲ್ಲಿರುವಂತ ‘ಪುನೀತ್ ರಾಜ್‌ಕುಮಾರ್ ಅನಾಥಾಶ್ರಮ ಸೇವಾ ಸಮಿತಿ’ಗೆ ಭೇಟಿ ನೀಡಿದ ಸಂಘದ ಪದಾಧಿಕಾರಿಗಳು, ಸುಮಾರು 20 ಸಾವಿರ ರೂ. ಮೌಲ್ಯದ ಅಕ್ಕಿ ಹಾಗೂ ಜೀವನಾವಶ್ಯಕ ಪಡಿತರ ವಸ್ತುಗಳನ್ನು ದೇಣಿಗೆಯಾಗಿ ನೀಡಿದ್ದಾರೆ.
ವೃದ್ಧರ ಮೌನ ವೇದನೆಗೆ ದನಿಯಾದ ಸಂಘ: ವಿಡಿಯೋದಲ್ಲಿ ಕಂಡುಬರುವಂತೆ, ಸಂಘದ ಸದಸ್ಯರು ಆಶ್ರಮದ ವೃದ್ಧರೊಂದಿಗೆ ಸಮಯ ಕಳೆದು ಅವರ ಯೋಗಕ್ಷೇಮ ವಿಚಾರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಕಾನೂನು ಸಲಹೆಗಾರರಾದ ವಿ. ಶಂಕರ್, “ನಾವು ದಿನವಿಡೀ ಓಮಿನಿ ಗಾಡಿ ಓಡಿಸಿ ದುಡಿದ ಹಣದಲ್ಲಿ ಒಂದು ಸಣ್ಣ ಪಾಲನ್ನು ಈ ರೀತಿಯ ಸಮಾಜಮುಖಿ ಕಾರ್ಯಕ್ಕೆ ಮೀಸಲಿಡುತ್ತಿದ್ದೇವೆ. ವಯಸ್ಸಾದ ಕಾಲದಲ್ಲಿ ಹೆತ್ತವರನ್ನು ಬೀದಿಗೆ ತಳ್ಳುವುದು ಅಥವಾ ಅನಾಥಾಶ್ರಮಕ್ಕೆ ಸೇರಿಸುವುದು ಕಾನೂನು ಮತ್ತು ಧರ್ಮ ಎರಡರಲ್ಲೂ ಅಪರಾಧ. ಆದರೆ, ಇಂತಹ ಕಷ್ಟದ ಸಂದರ್ಭದಲ್ಲಿಯೂ ನಾಗರಾಜ್ ನಾಯಕ್ ಮತ್ತು ಮಮತಾ ನಾಯಕ್ ದಂಪತಿಗಳು ಈ ವೃದ್ಧರ ಸೇವೆ ಮಾಡುತ್ತಿರುವುದು ಶ್ಲಾಘನೀಯ” ಎಂದು ಅಭಿಪ್ರಾಯಪಟ್ಟರು.
ನಮ್ಮ ಈ ಕಾರ್ಯ ಪ್ರಚಾರಕ್ಕಲ್ಲ, ಬದಲಾಗಿ ನಮ್ಮನ್ನು ನೋಡಿ ಇನ್ನೂ ಹತ್ತು ಮಂದಿ ಇಂತಹ ಆಶ್ರಮಗಳಿಗೆ ಸಹಾಯ ಮಾಡಲು ಮುಂದೆ ಬರಲಿ ಎಂಬ ಆಶಯ ನಮ್ಮದು” ಎಂದು ಸಂಘದ ಸದಸ್ಯರು ತಿಳಿಸಿದರು. ಪೋಷಕರ ಸಂರಕ್ಷಣಾ ಕಾಯ್ದೆಯ ಬಗ್ಗೆಯೂ ಅರಿವು ಮೂಡಿಸಿದ ಅವರು, ವೃದ್ಧರಿಗೆ ಯಾವುದೇ ರೀತಿಯ ಕಾನೂನು ನೆರವು ಬೇಕಾದಲ್ಲಿ ತಮ್ಮ ಸಂಘವು ಸದಾ ಸಿದ್ಧವಿರುವುದಾಗಿ ಭರವಸೆ ನೀಡಿದರು.
ಈ ಮಾನವೀಯ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ನಾಗರಾಜ್ ಪಿ., ಕಾರ್ಯದರ್ಶಿ ನಾಗರಾಜ್ ಕೆ., ಖಜಾಂಚಿ ನಾಗರಾಜ್ ಎನ್., ಹಾಗೂ ಸದಸ್ಯರಾದ ಉದಯಕುಮಾರ್, ಶ್ರೀನಾಥ್, ಪರಶುರಾಮ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ತಮ್ಮ ಕಾಯಕದ ನಡುವೆಯೂ ಸಮಾಜದ ಸಂಕಷ್ಟದಲ್ಲಿರುವವರಿಗೆ ನೆರವಾಗುತ್ತಿರುವ ಓಮಿನಿ ಚಾಲಕರ ಮತ್ತು ಮಾಲೀಕರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು…
BIG Alert: ‘ಆನ್‌ಲೈನ್’ನಲ್ಲಿ ‘IPL ಟಿಕೆಟ್’ ಖರೀದಿಗಾಗಿ ಹುಡುಕುತ್ತಿದ್ದೀರಾ? ಅದಕ್ಕೂ ಮುನ್ನ ಈ ಸುದ್ದಿ ಓದಿ.!








