ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ ಮತ್ತು ಉದ್ವಿಗ್ನತೆ ಮುಂದುವರಿದಿರುವ ಬೆನ್ನಲ್ಲೇ, ಭಾರತಕ್ಕೆ ನಿರಾಳ ತರುವ ಸುದ್ದಿಯೊಂದು ಹೊರಬಿದ್ದಿದೆ. ತೀವ್ರ ಕುತೂಹಲ ಕೆರಳಿಸಿದ್ದ ಭಾರತದ ಎಲ್‌ಪಿಜಿ ಟ್ಯಾಂಕರ್ ‘ಗ್ರೀನ್ ಸಾನ್ವಿ’ (Green Sanvi) ಯಶಸ್ವಿಯಾಗಿ ಆಯಕಟ್ಟಿನ ಹೋರ್ಮುಜ್ ಜಲಸಂಧಿಯನ್ನು ದಾಟಿದ್ದು, ದೇಶದತ್ತ ಪ್ರಯಾಣ ಬೆಳೆಸಿದೆ.
ಯುದ್ಧದ ಅನಿಶ್ಚಿತತೆಯ ನಡುವೆಯೂ ಹೋರ್ಮುಜ್ ಜಲಸಂಧಿಯನ್ನು ಸುರಕ್ಷಿತವಾಗಿ ದಾಟಿದ ಭಾರತದ 7ನೇ ಎಲ್‌ಪಿಜಿ ನೌಕೆ ಎಂಬ ಹೆಗ್ಗಳಿಕೆಗೆ ‘ಗ್ರೀನ್ ಸಾನ್ವಿ’ ಪಾತ್ರವಾಗಿದೆ. ಈ ಮೂಲಕ ಭಾರತಕ್ಕೆ ಅಡುಗೆ ಅನಿಲದ ಪೂರೈಕೆಯಲ್ಲಿ ಸ್ವಲ್ಪ ಮಟ್ಟಿನ ನಿರಾಳತೆ ಸಿಕ್ಕಂತಾಗಿದೆ.
ಇರಾನ್ ಪಡೆಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಈ ಹಡಗಿನ ಮೇಲೆ “India Ship, India Crew” (ಭಾರತೀಯ ಹಡಗು, ಭಾರತೀಯ ಸಿಬ್ಬಂದಿ) ಎಂಬ ದೊಡ್ಡ ಸಂದೇಶವನ್ನು ಪ್ರದರ್ಶಿಸಲಾಗುತ್ತಿದೆ. ಇದು ಸಂಘರ್ಷದ ವಲಯದಲ್ಲಿ ಸುರಕ್ಷಿತವಾಗಿ ಸಾಗಲು ಭಾರತೀಯ ನೌಕೆಗಳು ಬಳಸುತ್ತಿರುವ ವಿಶೇಷ ತಂತ್ರವಾಗಿದೆ.
ಗ್ರೀನ್ ಸಾನ್ವಿ ಹೊರಬಂದಿದ್ದರೂ, ಪರ್ಷಿಯನ್ ಗಲ್ಫ್ ಭಾಗದಲ್ಲಿ ಭಾರತದ ಇನ್ನೂ 17 ಹಡಗುಗಳು ಸಿಲುಕಿಕೊಂಡಿವೆ. ಇವುಗಳಲ್ಲಿ ಎಲ್‌ಪಿಜಿ, ಕಚ್ಚಾ ತೈಲ ಮತ್ತು ಕೆಮಿಕಲ್ ಹೊತ್ತ ನೌಕೆಗಳು ಸೇರಿವೆ.
ಕಾದು ಕುಳಿತಿರುವ ನೌಕೆಗಳು: ‘ಗ್ರೀನ್ ಆಶಾ’ ಮತ್ತು ‘ಜಗ್ ವಿಕ್ರಮ್’ ಎಂಬ ಎರಡು ಪ್ರಮುಖ ಎಲ್‌ಪಿಜಿ ಹಡಗುಗಳು ಸದ್ಯಕ್ಕೆ ಹೋರ್ಮುಜ್ ಜಲಸಂಧಿಯ ಸಮೀಪದಲ್ಲೇ ಉಳಿದುಕೊಂಡಿದ್ದು, ಭಾರತೀಯ ನೌಕಾಪಡೆಯ ಸೂಚನೆಗಾಗಿ ಕಾಯುತ್ತಿವೆ.








