ವಾಷಿಂಗ್ಟನ್:ಇರಾನ್, ಇಸ್ರೇಲ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆಯನ್ನು ಶಮನಗೊಳಿಸಲು ಪಾಕಿಸ್ತಾನ ನಡೆಸಿದ್ದ ಸಂಧಾನದ ಪ್ರಯತ್ನಕ್ಕೆ ಇರಾನ್ ಈಗ ತಣ್ಣೀರೆರಚಿದೆ. ಅಮೆರಿಕದ ಕಠಿಣ ಷರತ್ತುಗಳನ್ನು “ಅಸ್ವೀಕಾರಾರ್ಹ” ಎಂದು ಕರೆದಿರುವ ಇರಾನ್, ಯುದ್ಧದ ಅಂಚಿನಲ್ಲಿರುವ ಮಧ್ಯಪ್ರಾಚ್ಯದಲ್ಲಿ ಯಾವುದೇ ರಾಜಿ ಇಲ್ಲ ಎಂದು ಗುಡುಗಿದೆ.
ಇರಾನ್ ಮತ್ತು ಅಮೆರಿಕ ನಡುವೆ ಸಂಧಾನಕಾರನಾಗಿ ಕೆಲಸ ಮಾಡಲು ಪಾಕಿಸ್ತಾನ ಮುಂದೆ ಬಂದಿತ್ತು. ಆದರೆ, ಇರಾನ್ ಸರ್ಕಾರವು ಪಾಕಿಸ್ತಾನದ ಈ ಪ್ರಸ್ತಾಪವನ್ನು ಸಾರಾಸಗಟಾಗಿ ತಳ್ಳಿಹಾಕಿದ್ದು, “ನಮ್ಮ ಸಾರ್ವಭೌಮತ್ವದ ವಿಷಯದಲ್ಲಿ ಯಾರ ಮಧ್ಯಸ್ಥಿಕೆಯೂ ಬೇಡ” ಎಂದು ಸ್ಪಷ್ಟಪಡಿಸಿದೆ.
ತನ್ನ ಮಿಲಿಟರಿ ಶಕ್ತಿಯನ್ನು ಕುಗ್ಗಿಸಲು ಅಮೆರಿಕ ಹಾಕಿರುವ ಷರತ್ತುಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದು ಇರಾನ್ ಹೇಳಿದೆ. ಅಮೆರಿಕದ ಬೇಡಿಕೆಗಳು ಅಪ್ರಾಯೋಗಿಕ ಮತ್ತು ಏಕಪಕ್ಷೀಯವಾಗಿವೆ ಎಂದು ಟೆಹ್ರಾನ್ ಕಿಡಿಕಾರಿದೆ.
ಇಸ್ರೇಲ್ ಮೇಲೆ ದಾಳಿ ನಡೆಸಲು ಇರಾನ್ ತನ್ನ ಕ್ಷಿಪಣಿಗಳನ್ನು ಸನ್ನದ್ಧಗೊಳಿಸುತ್ತಿದ್ದರೆ, ಅತ್ತ ಅಮೆರಿಕವು ಇಸ್ರೇಲ್ ರಕ್ಷಣೆಗಾಗಿ ತನ್ನ ಹೆಚ್ಚುವರಿ ಯುದ್ಧನೌಕೆಗಳನ್ನು ಸಮುದ್ರಕ್ಕೆ ಇಳಿಸಿದೆ.








