ಶಿವಮೊಗ್ಗ: ವರದಕ್ಷಿಣೆ ಕಿರುಕುಳ ನೀಡಿ ಐದು ತಿಂಗಳ ಗರ್ಭಿಣಿ ಸೊಸೆಯ ಮೇಲೆ ಪೆಟ್ರೋಲ್ ಸುರಿದು ಕೊಲೆ ಮಾಡಿದ ಭೀಕರ ಘಟನೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಹೊಡಬಟ್ಟೆಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸೊರಬ ಠಾಣೆಯ ಪೊಲೀಸರು ಮೃತಳ ಅತ್ತೆ, ಮಾವ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಘಟನೆಯ ವಿವರ:
ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಹೊಡಬಟ್ಟೆ ಗ್ರಾಮದ ನಿವಾಸಿ ನವೀನ್ ಎಂಬುವವರ ಪತ್ನಿ, ವೃತ್ತಿಯಲ್ಲಿ ಸ್ಟಾಫ್ ನರ್ಸ್ ಆಗಿದ್ದ ಶ್ವೇತಾ (30) ಕೊಲೆಯಾದ ದುರ್ದೈವಿ. ಶ್ವೇತಾ ಅವರು ಐದು ತಿಂಗಳ ಗರ್ಭಿಣಿಯಾಗಿದ್ದರು ಎನ್ನಲಾಗಿದೆ. ಮಾರ್ಚ್ 30ರಂದು ಪತಿ ನವೀನ್ ಮನೆಯಲ್ಲಿ ಶ್ವೇತಾ ಅವರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿತ್ತು. ತೀವ್ರವಾಗಿ ಸುಟ್ಟ ಗಾಯಗೊಂಡಿದ್ದ ಅವರನ್ನು ಕೂಡಲೇ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಏಪ್ರಿಲ್ 1ರಂದು ಶ್ವೇತಾ ಕೊನೆಯುಸಿರೆಳೆದಿದ್ದಾರೆ.
ನಾಲ್ವರು ಆರೋಪಿಗಳ ಬಂಧನ:
ಶ್ವೇತಾ ಅವರ ಸಾವಿನ ಬೆನ್ನಲ್ಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವರದಕ್ಷಿಣೆ ಕಿರುಕುಳ ಮತ್ತು ಹತ್ಯೆ ಆರೋಪದಡಿ ಸೊರಬ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
- ಸಣ್ಣಪ್ಪ (ಮಾವ)
- ಜಾನಕಿ (ಅತ್ತೆ)
- ಹೇಮಂತ್ (ಪತಿ ನವೀನ್ ಅಣ್ಣ)
- ದಿವ್ಯಾ (ಹೇಮಂತ್ ಪತ್ನಿ) ಬಂದಿಸಿದ್ದಾರೆ.
ಅಂತಿಮ ಸಂಸ್ಕಾರ:
ಏಪ್ರಿಲ್ 1ರಂದು ಮೃತಪಟ್ಟ ಶ್ವೇತಾ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆಯನ್ನು ಏಪ್ರಿಲ್ 2ರಂದು (ಗುರುವಾರ) ನೆರವೇರಿಸಲಾಯಿತು. ಅಂತ್ಯಕ್ರಿಯೆ ಮುಗಿಯುತ್ತಿದ್ದಂತೆಯೇ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ವರದಕ್ಷಿಣೆಗಾಗಿ ಕಿರುಕುಳ ನೀಡಿ, ಗರ್ಭಿಣಿ ಎಂಬ ಕರುಣೆಯೂ ಇಲ್ಲದೆ ಪೆಟ್ರೋಲ್ ಸುರಿದು ಹತ್ಯೆ ಮಾಡಿರುವುದು ಇಡೀ ಜಿಲ್ಲೆಯನ್ನು ಬೆಚ್ಚಿಬೀಳಿಸಿದೆ. ಈ ಕುರಿತು ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.








