ನವದೆಹಲಿ: ರಾಷ್ಟ್ರೀಯ ಭದ್ರತೆ ಮತ್ತು ದತ್ತಾಂಶ ಸಂರಕ್ಷಣೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಮಹತ್ವದ ಹೆಜ್ಜೆ ಇಟ್ಟಿದೆ. ಏಪ್ರಿಲ್ 1, 2026 ರಿಂದ ಜಾರಿಗೆ ಬರುವಂತೆ, ಚೀನಾ ಮೂಲದ ಕಂಪನಿಗಳ ಇಂಟರ್ನೆಟ್ ಸಂಪರ್ಕಿತ ಸಿಸಿಟಿವಿ ಕ್ಯಾಮೆರಾಗಳ ಮಾರಾಟ ಮತ್ತು ಸ್ಥಾಪನೆಯ ಮೇಲೆ ಕಠಿಣ ನಿರ್ಬಂಧಗಳನ್ನು ವಿಧಿಸಲಾಗುತ್ತಿದೆ.
ಚೀನಾ ತಯಾರಿತ ಸಿಸಿಟಿವಿ ಕ್ಯಾಮೆರಾಗಳ ಮೂಲಕ ಭಾರತದ ಸೂಕ್ಷ್ಮ ಮಾಹಿತಿಗಳನ್ನು ಕದಿಯುವ ಮತ್ತು ಅನಧಿಕೃತವಾಗಿ ರಿಮೋಟ್ ಪ್ರವೇಶ (Remote Access) ಪಡೆಯುವ ಸಾಧ್ಯತೆ ಇರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ಈ ಸಾಧನಗಳಲ್ಲಿ ಬಳಕೆಯಾಗುವ ಚಿಪ್‌ಸೆಟ್ ಮತ್ತು ಸಾಫ್ಟ್‌ವೇರ್‌ಗಳು ರಾಷ್ಟ್ರೀಯ ಭದ್ರತೆಗೆ ಸಂಚಕಾರ ತರಬಹುದು ಎಂಬ ಆತಂಕ ಸರ್ಕಾರಕ್ಕಿದೆ.
ಪ್ರಮುಖವಾಗಿ ಚೀನಾದ ದೈತ್ಯ ಕಂಪನಿಗಳಾದ ಹಿಕ್-ವಿಷನ್ (Hikvision), ದಹುವಾ (Dahua) ಮತ್ತು ಟಿಪಿ-ಲಿಂಕ್ (TP-Link) ನಂತಹ ಬ್ರ್ಯಾಂಡ್‌ಗಳು ಈ ನಿರ್ಬಂಧದ ವ್ಯಾಪ್ತಿಗೆ ಬರಲಿವೆ. ಇವುಗಳಿಗೆ ಅಗತ್ಯವಾದ ಭದ್ರತಾ ಪ್ರಮಾಣಪತ್ರವನ್ನು (STQC Certification) ನೀಡಲು ಸರ್ಕಾರ ನಿರಾಕರಿಸಿದೆ.
ಏಪ್ರಿಲ್ 1 ರ ನಂತರ, ಯಾವುದೇ ಡೀಲರ್ ಅಥವಾ ಕಂಪನಿಗಳು ಈ ಪ್ರಮಾಣೀಕೃತವಲ್ಲದ ಕ್ಯಾಮೆರಾಗಳನ್ನು ಮಾರಾಟ ಮಾಡುವಂತಿಲ್ಲ ಅಥವಾ ಹೊಸದಾಗಿ ಅಳವಡಿಸುವಂತಿಲ್ಲ.
ಹಳೆಯ ಕ್ಯಾಮೆರಾಗಳ ಗತಿ ಏನು?: ಈಗಾಗಲೇ ನಿಮ್ಮ ಮನೆ ಅಥವಾ ಕಚೇರಿಯಲ್ಲಿ ಅಳವಡಿಸಲಾಗಿರುವ ಚೀನಾ ನಿರ್ಮಿತ ಸಿಸಿಟಿವಿಗಳು ಕೆಲಸ ಮಾಡುವುದನ್ನು ನಿಲ್ಲಿಸುವುದಿಲ್ಲ. ಆದರೆ, ಭದ್ರತೆಯ ದೃಷ್ಟಿಯಿಂದ ಅವುಗಳನ್ನು ಬದಲಾಯಿಸುವುದು ಅಥವಾ ಅಂತರಾಷ್ಟ್ರೀಯ ಗುಣಮಟ್ಟದ ಸಾಫ್ಟ್‌ವೇರ್ ಅಪ್‌ಡೇಟ್ ಮಾಡುವುದು ಉತ್ತಮ ಎಂದು ತಜ್ಞರು ಸಲಹೆ ನೀಡಿದ್ದಾರೆ.








