ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಅತಿದೊಡ್ಡ ಯಶಸ್ಸುಗಳಲ್ಲಿ ‘ನಕ್ಸಲ್ ಮುಕ್ತ ಭಾರತ’ವೂ ಒಂದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ಲೋಕಸಭೆಯಲ್ಲಿ ಘೋಷಿಸಿದ್ದಾರೆ. ಸರ್ಕಾರ ನಿಗದಿಪಡಿಸಿದ್ದ ಮಾರ್ಚ್ 31, 2026ರ ಗಡುವಿನ ವೇಳೆಗೆ ದೇಶದಲ್ಲಿ ನಕ್ಸಲಿಸಂ ಅನ್ನು ಬಹುತೇಕ ಬೇರುಸಹಿತ ಕಿತ್ತೊಗೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ.
“ಮಾರ್ಚ್ 31ರ ವೇಳೆಗೆ ದೇಶವನ್ನು ನಕ್ಸಲ್ ಮುಕ್ತಗೊಳಿಸುವ ಗುರಿಯನ್ನು ನಾವು ಹೊಂದಿದ್ದೆವು. ಇಂದು ನಾನು ಪೂರ್ಣ ಆತ್ಮವಿಶ್ವಾಸದಿಂದ ಹೇಳಬಲ್ಲೆ, ಭಾರತವು ಈಗ ನಕ್ಸಲ್ ಮುಕ್ತವಾಗಿದೆ,” ಎಂದು ಅಮಿತ್ ಶಾ ಸದನದಲ್ಲಿ ತಿಳಿಸಿದರು.ನಕ್ಸಲರ ಉನ್ನತ ಮಟ್ಟದ ಸಮಿತಿ (Politburo) ಮತ್ತು ಕೇಂದ್ರ ಸಂರಚನೆಯನ್ನು ಸಂಪೂರ್ಣವಾಗಿ ಧ್ವಂಸಗೊಳಿಸಲಾಗಿದೆ. ಛತ್ತೀಸ್‌ಗಢದ ಬಸ್ತಾರ್‌ನಂತಹ ಭದ್ರಕೋಟೆಗಳಲ್ಲೂ ನಕ್ಸಲರ ಪ್ರಭಾವ ಅಳಿಸಿಹೋಗಿದೆ ಎಂದು ಅವರು ವಿವರಿಸಿದರು.
ಕಳೆದ ಕೆಲವು ವರ್ಷಗಳಲ್ಲಿ ನಡೆಸಿದ ತೀವ್ರ ಕಾರ್ಯಾಚರಣೆಯಲ್ಲಿ 706 ನಕ್ಸಲರನ್ನು ಎನ್ಕೌಂಟರ್‌ನಲ್ಲಿ ಹತ್ಯೆ ಮಾಡಲಾಗಿದ್ದು, 4,839 ಮಂದಿ ಶರಣಾಗಿದ್ದಾರೆ ಮತ್ತು 2,218 ಜನರನ್ನು ಜೈಲಿಗಟ್ಟಲಾಗಿದೆ.ಕೇವಲ ಶಸ್ತ್ರಾಸ್ತ್ರಗಳಿಂದ ಮಾತ್ರವಲ್ಲದೆ, ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ರಸ್ತೆ, ಶಾಲೆ, ಬ್ಯಾಂಕಿಂಗ್ ಮತ್ತು ಕುಡಿಯುವ ನೀರಿನ ಸೌಲಭ್ಯಗಳನ್ನು ಒದಗಿಸುವ ಮೂಲಕ ಅಲ್ಲಿನ ಜನರನ್ನು ಮುಖ್ಯವಾಹಿನಿಗೆ ತರಲಾಗಿದೆ ಎಂದು ಶಾ ಹೇಳಿದರು.






