ತೆಹ್ರಾನ್: ಇರಾನ್‌ನ ಮಶ್ಹದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಅಮೆರಿಕದ ಪಡೆಗಳು ನಡೆಸಿದ ಭೀಕರ ವೈಮಾನಿಕ ದಾಳಿಯಲ್ಲಿ ‘ಮಹಾನ್ ಏರ್’ (Mahan Air) ಸಂಸ್ಥೆಗೆ ಸೇರಿದ ನಾಗರಿಕ ವಿಮಾನವೊಂದು ಜಖಂಗೊಂಡಿದೆ. ಈ ವಿಮಾನವು ಭಾರತಕ್ಕೆ ಮಾನವೀಯ ನೆರವು ಮತ್ತು ಔಷಧಗಳನ್ನು ಹೊತ್ತು ತರಬೇಕಿತ್ತು ಎಂದು ಇರಾನ್ ಮೂಲಗಳು ತಿಳಿಸಿವೆ.
ಮಶ್ಹದ್ ವಿಮಾನ ನಿಲ್ದಾಣದಲ್ಲಿ ನಿಂತಿದ್ದ ವಿಮಾನವನ್ನು ಗುರಿಯಾಗಿಸಿ ಈ ದಾಳಿ ನಡೆದಿದೆ. ಈ ಘಟನೆಯಿಂದಾಗಿ ಭಾರತಕ್ಕೆ ತಲುಪಬೇಕಿದ್ದ ತುರ್ತು ವೈದ್ಯಕೀಯ ಸರಬರಾಜು ಮತ್ತು ಮಾನವೀಯ ಮಿಷನ್‌ಗೆ ದೊಡ್ಡ ಮಟ್ಟದ ಅಡಚಣೆಯಾಗಿದೆ.ಇರಾನ್‌ನ ನಾಗರಿಕ ವಿಮಾನಯಾನ ಸಂಸ್ಥೆಯು ಈ ದಾಳಿಯನ್ನು ಕಟುವಾಗಿ ಖಂಡಿಸಿದೆ. “ಔಷಧಗಳನ್ನು ಸಾಗಿಸುವ ನಾಗರಿಕ ವಿಮಾನದ ಮೇಲೆ ದಾಳಿ ಮಾಡುವುದು ಜಿನೀವಾ ಒಪ್ಪಂದದ ಅಡಿ ‘ಯುದ್ಧಾಪರಾಧ’ (War Crime) ಮತ್ತು ಅಂತರಾಷ್ಟ್ರೀಯ ಕಾನೂನುಗಳ ಸ್ಪಷ್ಟ ಉಲ್ಲಂಘನೆ” ಎಂದು ಇರಾನ್ ಕಿಡಿಕಾರಿದೆ.
ವಿಮಾನವು ನವದೆಹಲಿಗೆ ಬರಲು ಸಜ್ಜಾಗಿತ್ತು. ಇತ್ತೀಚಿನ ದಿನಗಳಲ್ಲಿ ಭಾರತ ಮತ್ತು ಇರಾನ್ ನಡುವೆ ಮಾನವೀಯ ನೆರವು ವಿನಿಮಯದ ಕಾರ್ಯಗಳು ನಡೆಯುತ್ತಿದ್ದು, ಈ ವಿಮಾನವು ಅದರ ಪ್ರಮುಖ ಕೊಂಡಿಯಾಗಿತ್ತು.ಈ ನಿರ್ದಿಷ್ಟ ದಾಳಿಯ ಬಗ್ಗೆ ವಾಷಿಂಗ್ಟನ್‌ನಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ. ಆದರೆ, ಅಮೆರಿಕವು ಈ ಹಿಂದೆ ‘ಮಹಾನ್ ಏರ್’ ಸಂಸ್ಥೆಯ ಮೇಲೆ ನಿರ್ಬಂಧ ಹೇರಿತ್ತು, ಈ ಸಂಸ್ಥೆಯು ಇರಾನ್‌ನ ಕ್ರಾಂತಿಕಾರಿ ಪಡೆಗಳಿಗೆ (IRGC) ಸಹಾಯ ಮಾಡುತ್ತಿದೆ ಎಂಬುದು ಅಮೆರಿಕದ ಆರೋಪವಾಗಿತ್ತು.






