ಮೈಸೂರು : ಆಟವಾಡುತ್ತಿದ್ದ ಮಗುವೊಂದು ಪೂಜೆಗೆ ಇಟ್ಟಿದ್ದ ಒಣಗಿದ ದಾಸವಾಳದ ಹೂವನ್ನು ನುಂಗಿ, ಉಸಿರುಗಟ್ಟಿ ಸಾವನ್ನಪ್ಪಿರುವ ಅತ್ಯಂತ ಮನಕಲಕುವ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ದೊಡ್ಡ ಹೆಜ್ಜೂರು ಗ್ರಾಮದಲ್ಲಿ ಸಂಭವಿಸಿದೆ.
ಘಟನೆಯ ವಿವರ
ಮೃತಪಟ್ಟ ಮಗುವನ್ನು ಆರೂವರೆ ತಿಂಗಳ ಚಿನ್ನಯಿಗೌಡ ಎಂದು ಗುರುತಿಸಲಾಗಿದೆ. ಮನೆಯ ಹೊಸ್ತಿಲಿನಲ್ಲಿ ಪೂಜೆಗಾಗಿ ಇಟ್ಟಿದ್ದ ಒಣಗಿದ ದಾಸವಾಳದ ಹೂವು ಮಗುವಿನ ಕೈಗೆ ಸಿಕ್ಕಿದೆ. ಆಟವಾಡುತ್ತಾ ಮಗು ಆ ಹೂವನ್ನು ಬಾಯಿಗೆ ಹಾಕಿಕೊಂಡು ನುಂಗಿದೆ. ಹೂವು ಗಂಟಲಿನಲ್ಲಿ ಸಿಲುಕಿಕೊಂಡಿದ್ದರಿಂದ ಮಗುವಿಗೆ ತೀವ್ರವಾಗಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ.
ಚಿಕಿತ್ಸೆ ಫಲಕಾರಿಯಾಗದ ಸಾವು:
ಮಗು ಅಸ್ವಸ್ಥಗೊಂಡಿರುವುದನ್ನು ಗಮನಿಸಿದ ಪೋಷಕರು ತಕ್ಷಣವೇ ಮಗುವನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಮಗುವಿನ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮಗು ಕೊನೆಯುಸಿರೆಳೆದಿದೆ. ಕಂದಮ್ಮನ ಅಕಾಲಿಕ ಮರಣದಿಂದ ದೊಡ್ಡ ಹೆಜ್ಜೂರು ಗ್ರಾಮದಲ್ಲಿ ಶೋಕದ ಛಾಯೆ ಆವರಿಸಿದೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಗಮನಿಸಿ: ಸಣ್ಣ ಮಕ್ಕಳಿರುವ ಮನೆಯಲ್ಲಿ ನೆಲದ ಮೇಲೆ ಅಥವಾ ಮಗುವಿನ ಕೈಗೆ ಸಿಗುವ ಅಂತರದಲ್ಲಿ ಯಾವುದೇ ಸಣ್ಣ ವಸ್ತುಗಳು (ಗುಂಡಿ, ನಾಣ್ಯ, ಹೂವು, ಸಣ್ಣ ಆಟಿಕೆಗಳು) ಇರದಂತೆ ನೋಡಿಕೊಳ್ಳುವುದು ಅತ್ಯಂತ ಅವಶ್ಯಕ.








