ಬೆಂಗಳೂರು: ಯುದ್ಧದ ಈ ಕಷ್ಟಕಾಲದಲ್ಲಿ ಸಾರ್ವಜನಿಕರು ಸಹಕಾರ ನೀಡಬೇಕು ಮತ್ತು ಎಲ್ಪಿಜಿ ಗ್ಯಾಸ್ ಅನ್ನು ಮಿತವಾಗಿ ಬಳಸಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಅವರು ಮನವಿ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನಿಲ ಬಳಕೆಯ ಕುರಿತು ಹೊಸ ಮಾರ್ಗಸೂಚಿಗಳನ್ನು ಪ್ರಸ್ತಾಪಿಸಿದರು, ನಗರದ ನಿವಾಸಿಗಳು ಅಡುಗೆಗಾಗಿ ಎಲೆಕ್ಟ್ರಿಕ್ ಸ್ಟೌವ್ಗಳನ್ನು (Electric Stove) ಬಳಸಲು ಆದ್ಯತೆ ನೀಡಬೇಕು. ನಗರ ಪ್ರದೇಶದಲ್ಲಿ ಪ್ರತಿ 25 ದಿನಗಳಿಗೊಮ್ಮೆ ಗೃಹ ಬಳಕೆಯ ಸಿಲಿಂಡರ್ ಬುಕ್ ಮಾಡಲು ಅವಕಾಶ ನೀಡಲಾಗಿದೆ.
ಹಳ್ಳಿಯ ಜನರು ಹಳೆಯ ಪದ್ಧತಿಯಂತೆ ಸೌದೆ ಒಲೆಗಳ ಮೂಲಕ ಅಡುಗೆ ಮಾಡಲು ಮುಂದಾಗಬೇಕು. ಗ್ರಾಮೀಣ ಭಾಗದಲ್ಲಿ ಇನ್ನು ಮುಂದೆ ಪ್ರತಿ 45 ದಿನಗಳಿಗೊಮ್ಮೆ ಮಾತ್ರ ಒಂದು ಸಿಲಿಂಡರ್ ಪೂರೈಕೆ ಮಾಡಲಾಗುವುದು ಎಂದು ಅವರು ತಿಳಿಸಿದರು.
ಸೌದೆ ಬಳಕೆಗೆ ಒತ್ತು:
“ಗ್ರಾಮೀಣ ಭಾಗದಲ್ಲಿ ಶತಮಾನಗಳಿಂದ ಸೌದೆ ಬಳಸಿ ಅಡುಗೆ ಮಾಡುವುದನ್ನು ನಾವು ನೋಡಿದ್ದೇವೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಇದನ್ನು ಪಾಲಿಸುವುದು ಅನಿವಾರ್ಯ” ಎಂದು ಸಚಿವರು ಅಭಿಪ್ರಾಯಪಟ್ಟರು. ಸದ್ಯಕ್ಕೆ ಎಲ್ಪಿಜಿ ಪೂರೈಕೆ ಸುಧಾರಿಸಿದ್ದು, ಯಾವುದೇ ವ್ಯತ್ಯಯವಿಲ್ಲದಂತೆ ಸರಬರಾಜು ಮಾಡುತ್ತಿರುವುದಾಗಿ ಅವರು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.








