ಕೊಪ್ಪಳ: ಆಟವಾಡುತ್ತಿದ್ದ ಮಗು ಆಕಸ್ಮಿಕವಾಗಿ ನೀರಿನ ಸಂಪ್ಗೆ ಬಿದ್ದು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಕೊಪ್ಪಳ ಜಿಲ್ಲೆಯ ಕಾರಟಗಿ ಪಟ್ಟಣದಲ್ಲಿ ಶನಿವಾರ ನಡೆದಿದೆ.
ಘಟನೆಯ ವಿವರ
ಕಾರಟಗಿ ಪಟ್ಟಣದ ರಾಜೀವ್ ಗಾಂಧಿನಗರದ ನಿವಾಸಿ ಕಳಕಪ್ಪ ಎಂಬುವವರ ಪುತ್ರಿ ಹಂಶಿಕಾ (3) ಮೃತಪಟ್ಟ ದುರ್ದೈವಿ. ಶನಿವಾರ ಬೆಳಿಗ್ಗೆ ಹಂಶಿಕಾ ತನ್ನ ಮನೆಯ ಮುಂದೆ ನೆರೆಮನೆಯ ಬಾಲಕ ಹರ್ಷವರ್ಧನ್ ಎಂಬಾತನೊಂದಿಗೆ ಆಟವಾಡುತ್ತಿದ್ದಳು. ಈ ವೇಳೆ ಆಟವಾಡುತ್ತಾ ಹೋದ ಬಾಲಕಿ ಮನೆಯ ಹೊರಗಿದ್ದ ನೀರಿನ ಸಂಪ್ಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದಾಳೆ.
ಆಸ್ಪತ್ರೆಗೆ ದಾಖಲು:
ಮಗು ನೀರಿನಲ್ಲಿ ಬಿದ್ದಿರುವುದನ್ನು ಗಮನಿಸಿದ ಪೋಷಕರು ಹಾಗೂ ನೆರೆಹೊರೆಯವರು ಕೂಡಲೇ ಮಗುವನ್ನು ಸಂಪ್ನಿಂದ ಹೊರತೆಗೆದು ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಆದರೆ, ಪರೀಕ್ಷಿಸಿದ ವೈದ್ಯರು ಮಗು ಈಗಾಗಲೇ ಮೃತಪಟ್ಟಿದೆ ಎಂದು ದೃಢಪಡಿಸಿದ್ದಾರೆ.
ಕಂದಮ್ಮನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಪೋಷಕರ ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಆಟವಾಡಿಕೊಂಡಿದ್ದ ಮಗು ಕ್ಷಣಾರ್ಧದಲ್ಲಿ ಹೆಣವಾಗಿರುವುದನ್ನು ಕಂಡು ಇಡೀ ಬಡಾವಣೆ ಶೋಕಸಾಗರದಲ್ಲಿ ಮುಳುಗಿದೆ. ಘಟನೆಗೆ ಸಂಬಂಧಿಸಿದಂತೆ ಕಾರಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.








