ಬೆಂಗಳೂರು: ಮುಂಬರುವ 2027ರ ಜನಗಣತಿಯ ಅಂಗವಾಗಿ, ಸಾರ್ವಜನಿಕರು ಆನ್ಲೈನ್ ಮೂಲಕ ತಾವೇ ಸ್ವತಃ ತಮ್ಮ ಕುಟುಂಬದ ಮಾಹಿತಿಯನ್ನು ಒದಗಿಸಲು (ಸ್ವಯಂ-ಗಣತಿ) ಅವಕಾಶ ಕಲ್ಪಿಸಲಾಗಿದೆ. ಈ ಸುರಕ್ಷಿತ ವೆಬ್ ಪೋರ್ಟಲ್ ಸೌಲಭ್ಯವನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಂಡು ಜನಗಣತಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ. ಜಗದೀಶ್ ಮನವಿ ಮಾಡಿದ್ದಾರೆ.
ಜಿಲ್ಲೆಯಲ್ಲಿ ಏಪ್ರಿಲ್ 16 ರಿಂದ ಮನೆ ಪಟ್ಟಿ ಮತ್ತು ಮನೆಗಣತಿ ಕಾರ್ಯ ಅಧಿಕೃತವಾಗಿ ಆರಂಭವಾಗಲಿದೆ. ಇದಕ್ಕೂ 15 ದಿನಗಳ ಮುಂಚಿತವಾಗಿ, ಅಂದರೆ ಏಪ್ರಿಲ್ 1, 2026 ರಿಂದ ಆನ್ಲೈನ್ ಪೋರ್ಟಲ್ ತೆರೆಯಲಿದ್ದು, ಸಾರ್ವಜನಿಕರು ತಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಬಳಸಿ ಮಾಹಿತಿಯನ್ನು ದಾಖಲಿಸಬಹುದಾಗಿದೆ.
ಸ್ವಯಂ ಗಣತಿ ಅವಧಿ: ಏಪ್ರಿಲ್ 01, 2026 ರಿಂದ ಏಪ್ರಿಲ್ 15, 2026 ರವರೆಗೆ.
ಅಧಿಕೃತ ವೆಬ್ ಪೋರ್ಟಲ್: se.census.gov.in
ಸಾಧನಗಳು: ಮೊಬೈಲ್, ಡೆಸ್ಕ್ಟಾಪ್, ಲ್ಯಾಪ್ಟಾಪ್ ಮೂಲಕ ಲಭ್ಯ.
ಮಾಹಿತಿ ಭರ್ತಿ ಪ್ರಕ್ರಿಯೆ ಹೇಗೆ?
ಸಾರ್ವಜನಿಕರು ಪೋರ್ಟಲ್ನಲ್ಲಿ ತಮ್ಮ ರಾಜ್ಯ, ಜಿಲ್ಲೆ, ತಾಲ್ಲೂಕು, ಗ್ರಾಮ/ಪಟ್ಟಣ/ನಗರ ಸೇರಿದಂತೆ ಸ್ಥಳದ ವಿವರಗಳನ್ನು ಕಡ್ಡಾಯವಾಗಿ ನಮೂದಿಸಬೇಕು. ನಿಖರತೆಗಾಗಿ ಪಿನ್ಕೋಡ್ ಹಾಗೂ ಡಿಜಿಟಲ್ ಮ್ಯಾಪ್ ಮೂಲಕ ಮನೆಯ ಸ್ಥಳವನ್ನು ಗುರುತಿಸುವ ಅತ್ಯಾಧುನಿಕ ವ್ಯವಸ್ಥೆಯನ್ನು ಪೋರ್ಟಲ್ನಲ್ಲಿ ಅಳವಡಿಸಲಾಗಿದೆ.
ಸ್ವಯಂ-ಗಣತಿ (Self-Enumeration) ಪೋರ್ಟಲ್ನಲ್ಲಿನ ಪ್ರಶ್ನೆಗಳನ್ನು ಗಣತಿದಾರರು ಬಳಸುವ ಮೊಬೈಲ್ ಆಪ್ ಮಾದರಿಯಲ್ಲೇ ರೂಪಿಸಲಾಗಿದೆ. ಕೆಲವು ಮಾಹಿತಿಗಳು ಮೊದಲೇ ಭರ್ತಿಯಾಗಿರುವ (Pre-filled) ಸಾಧ್ಯತೆಯಿದ್ದು, ನಾಗರಿಕರ ಅನುಕೂಲಕ್ಕಾಗಿ ಮಾರ್ಗಸೂಚಿಗಳು ಹಾಗೂ ಪದೇ ಪದೇ ಕೇಳಲಾಗುವ ಪ್ರಶ್ನೆಗಳ (FAQs) ವಿವರಗಳನ್ನೂ ವೆಬ್ಸೈಟ್ನಲ್ಲಿ ಒದಗಿಸಲಾಗಿದೆ.
ಗಣತಿದಾರರಿಗೆ ‘ಐಡಿ’ ನೀಡಿದರೆ ಸಾಕು:
ಕುಟುಂಬದ ಮಾಹಿತಿಯನ್ನು ಯಶಸ್ವಿಯಾಗಿ ಆನ್ಲೈನ್ನಲ್ಲಿ ಸಲ್ಲಿಸಿದ ಬಳಿಕ, ನಾಗರಿಕರ ಮೊಬೈಲ್ ಸಂಖ್ಯೆಗೆ ಎಸ್ಎಂಎಸ್ (SMS) ಹಾಗೂ ಇ-ಮೇಲ್ ಮೂಲಕ ವಿಶಿಷ್ಟ ‘ಸ್ವಯಂ-ಗಣತಿ ಐಡಿ’ (Self-Enumeration ID) ರವಾನೆಯಾಗುತ್ತದೆ. ತದನಂತರ ಮನೆಗೆ ಭೇಟಿ ನೀಡುವ ಗಣತಿದಾರರಿಗೆ (Enumerators) ಕೇವಲ ಈ ಐಡಿಯನ್ನು ಹಂಚಿಕೊಂಡರೆ ಸಾಕಾಗುತ್ತದೆ.
ಆನ್ಲೈನ್ ಮೂಲಕ ಸ್ವಯಂ ಗಣತಿಯಲ್ಲಿ ಪಾಲ್ಗೊಳ್ಳುವುದರಿಂದ ಸಾರ್ವಜನಿಕರ ಹಾಗೂ ಸಿಬ್ಬಂದಿಯ ಸಮಯ ಉಳಿತಾಯವಾಗುವುದಲ್ಲದೆ, ನಿಖರ ಮತ್ತು ಸಮಗ್ರ ಮಾಹಿತಿ ಸಂಗ್ರಹಿಸಲು ಸಹಕಾರಿಯಾಗಲಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.








