ಅಬುಧಾಬಿ: ಪಶ್ಚಿಮ ಏಷ್ಯಾದಲ್ಲಿ ಉಲ್ಬಣಿಸಿರುವ ಯುದ್ಧದ ಭೀತಿಯ ನಡುವೆ, ಅಬುಧಾಬಿಯಲ್ಲಿ ಗುರುವಾರ (ಮಾರ್ಚ್ 26, 2026) ನಡೆದ ಕ್ಷಿಪಣಿ ದಾಳಿಯ ಸಂದರ್ಭದಲ್ಲಿ ಭಾರತೀಯ ಪ್ರಜೆಯೊಬ್ಬರು ಮೃತಪಟ್ಟಿದ್ದಾರೆ. ತೈಲ ಸಂಪತ್ತು ಹೊಂದಿರುವ ಈ ರಾಷ್ಟ್ರದ ಮೇಲೆ ನಡೆದ ಕ್ಷಿಪಣಿ ದಾಳಿಯನ್ನು ಯುಎಇ (UAE) ರಕ್ಷಣಾ ವ್ಯವಸ್ಥೆಯು ಯಶಸ್ವಿಯಾಗಿ ತಡೆದಿದೆಯಾದರೂ, ಅದರ ತುಣುಕುಗಳು ಜನನಿಬಿಡ ರಸ್ತೆಯ ಮೇಲೆ ಬಿದ್ದ ಪರಿಣಾಮ ಈ ಸಾವು ಸಂಭವಿಸಿದೆ.
ಅಬುಧಾಬಿಯ ಸ್ವೀಹಾನ್ ರಸ್ತೆಯಲ್ಲಿ (Sweihan Street) ಈ ಘಟನೆ ನಡೆದಿದೆ. ವಾಯು ರಕ್ಷಣಾ ವ್ಯವಸ್ಥೆಯು ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಹೊಡೆದುರುಳಿಸಿದಾಗ, ಅದರ ಅವಶೇಷಗಳು ಕೆಳಗೆ ಬಿದ್ದಿವೆ.ಈ ಘಟನೆಯಲ್ಲಿ ಒಬ್ಬ ಭಾರತೀಯ ಮತ್ತು ಒಬ್ಬ ಪಾಕಿಸ್ತಾನಿ ಪ್ರಜೆ ಮೃತಪಟ್ಟಿದ್ದಾರೆ. ಇದಲ್ಲದೆ, ಮತ್ತೊಬ್ಬ ಭಾರತೀಯ ಸೇರಿದಂತೆ ಮೂವರು ಗಾಯಗೊಂಡಿದ್ದಾರೆ ಎಂದು ಅಬುಧಾಬಿ ಮಾಧ್ಯಮ ಕಚೇರಿ ತಿಳಿಸಿದೆ.
ಇರಾನ್‌ನಿಂದ ಉಡಾಯಿಸಲಾದ ಸುಮಾರು 15 ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು 11 ಡ್ರೋನ್‌ಗಳನ್ನು ಯುಎಇ ರಕ್ಷಣಾ ಪಡೆಗಳು ಹೊಡೆದುರುಳಿಸಿವೆ ಎಂದು ವರದಿಯಾಗಿದೆ.ಈ ಘಟನೆಗೆ ಯುಎಇಯಲ್ಲಿರುವ ಭಾರತೀಯ ರಾಯಭಾರ ಕಚೇರಿಯು ತೀವ್ರ ಸಂತಾಪ ವ್ಯಕ್ತಪಡಿಸಿದೆ. ಮೃತರ ಕುಟುಂಬಕ್ಕೆ ಅಗತ್ಯವಿರುವ ಎಲ್ಲಾ ಸಹಾಯ ಮತ್ತು ಸಹಕಾರ ನೀಡಲು ಯುಎಇ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ.








