ಶಿವಮೊಗ್ಗ: ಶಿಕ್ಷಕರು ವಿದ್ಯಾರ್ಥಿಯೊಬ್ಬನ ಭವಿಷ್ಯ ರೂಪಿಸಬೇಕಿದ್ದವು. ಬೆಳೆಯುವ ಸಿರಿ ಮೊಳೆಯೊಡೆದು ಹೆಮ್ಮರವಾಗಿ ತಿದ್ದಿ ತೀಡಬೇಕಾದವರು. ಆ ಕೆಲಸ ಮಾಡದೇ ಹಾಗೆ ಮಾಡಿದ, ಹೀಗೆ ಮಾಡಿ ಎಂಬ ಸಬೂಬು ಹೇಳಿಕೊಂಡು ಇಡೀ ರಾಜ್ಯವೇ ತಲೆ ತಗ್ಗಿಸೋ ರೀತಿಯಲ್ಲಿ ಬಾಸುಂಡೆ ಬರುವಂತ, ರಕ್ತ ಬರುವಂತೆ, ಚರ್ಮ ಸುಲಿದು ಬರುವಂತೆ ಹೊಡೆದಂತ ಘಟನೆ ಸಾಗರದ ಶೆಡ್ತೀಕೆರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿತ್ತು. ಈ ಅಮಾನುಷ ಕೃತ್ಯ ಎಸಗಿದೆ ಓರ್ವ ಶಿಕ್ಷಕನ ವಿರುದ್ಧ ಇಲಾಖೆ ಅಮಾನತಿನಂತ ಕ್ರಮ ಜರುಗಿಸಿದೆ. ಆದರೇ ಇನ್ನೂ ಇಬ್ಬರು ಶಿಕ್ಷಕರ ಮೇಲೆ ಇದೇ ಆರೋಪ ಕೇಳಿ ಬಂದಿದೆ. ಆದರೇ ತಿದ್ದಿ ಬುದ್ದಿ ಹೇಳಿ ಬದಲಾಯಿಸಬೇಕಿದ್ದ ಶಿಕ್ಷಕರು ಮಾತ್ರ, ಈಗ ತಮ್ಮ ತಪ್ಪು ಮುಚ್ಚಿಡಲು ವಿದ್ಯಾರ್ಥಿಗೆ ಬ್ಯಾಡ್ ಕ್ಯಾರೆಕ್ಟರ್ ಪಟ್ಟ ಕಟ್ಟುತ್ತಾ ಸಾಗಿದ್ದಾರೆ. ಛೇ..! ಇವರೆಂಥಾ ಶಿಕ್ಷಕರು ಎಂಬುದು ಪೋಷಕರ ಕಿಡಿ ನುಡಿಯಾಗಿದೆ.
ಶಿಕ್ಷಕರಾದವರು ಸಮ್ಯಮ, ತಾಳ್ಮೆ, ಕ್ಷಮಾ ಗುಣದ ಜೊತೆಗೆ ವಿದ್ಯಾರ್ಥಿಯೊಬ್ಬನ ಮನಸ್ಸನ್ನೇ ಪರಿವರ್ತಿಸುವ ಮನೋವಿಜ್ಞಾನ ಓದಿದ ಜ್ಞಾನಿಯಾದವರು. ಇಂತಹ ಜ್ಞಾನಿಯಾದ ಶಿಕ್ಷಕರೇ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಶೆಡ್ತೀಕೆರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿ ವ್ಯಾಸಂಗ ಮಾಡುತ್ತಿದ್ದಂತ ಸುಶ್ರುತ ಎನ್ನುವ ಬಾಲಕನ ಮೇಲೆ ಬಾಲ್ ಕದ್ದ, ದುಡ್ಡು ಕದ್ದ, ಹಾಗೇ, ಹೀಗೆ ಎನ್ನುವ ಇಲ್ಲ ಸಲ್ಲದ ಆರೋಪ ಮಾಡಿ ಕಳೆದ ಮಾರ್ಚ್.12ರಂದು ಮುಖ್ಯ ಶಿಕ್ಷಕ ಸೇರಿದಂತೆ ಇಬ್ಬರು ಸಹ ಶಿಕ್ಷಕರನ್ನು ಒಳಗೊಂಡು ಚರ್ಮ ಸುಲಿದು ಬರುವಂತೆ, ರಕ್ತ ಹೊರ ಬರುವಂತೆ, ಕೈ ಕಾಲುಗಳಲ್ಲಿ ಬಾಸುಂಡೆ ಬರುವಂತೆ ಒಡೆದದ್ದು ಮಾತ್ರ ಖಂಡನೀಯ ಎಂಬುದು ಪೋಷಕರ ಮಾತು.
ಸಹ ಶಿಕ್ಷಕ ಪ್ರಮೋದ್ ಸಣ್ಣಕ್ಕಿ ಅಮಾನತು, ಇತರೆ ಶಿಕ್ಷಕರು ಕ್ರಮ ತಪ್ಪಿಸಲು ಹೈಡ್ರಾಮಾ
ವಿದ್ಯಾರ್ಥಿಯ ಮೇಲೆ ಹಲ್ಲೆ ಮಾಡಿದ್ದರ ಕಾರಣ ಶೆಡ್ತೀಕೆರೆ ಸರ್ಕಾರಿ ಶಾಲೆಯ ಸಹ ಶಿಕ್ಷಕ ಪ್ರಮೋದ್ ಸಣ್ಣಕ್ಕಿಯನ್ನು ಶಿವಮೊಗ್ಗ ಡಿಡಿಪಿಐ ಅಮಾನತುಗೊಳಿಸಿದ್ದಾರೆ. ಇದಲ್ಲದೇ ಶಾಲೆಯ ಮುಖ್ಯೋಪಾಧ್ಯಾಯ ರಮೇಶ್ ನಾರಾಯಣ್ ಸೇರಿ ಇನ್ನೊಬ್ಬ ಶಿಕ್ಷಕರ ವಿರುದ್ಧವೂ ಕ್ರಮ ವಹಿಸೋದಕ್ಕೆ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಸುಮೋಟೋ ಕೇಸ್ ದಾಖಲಿಸಿ, ಸೂಕ್ತ ಕ್ರಮಕ್ಕೂ ಶಾಲಾ ಶಿಕ್ಷಣ ಇಲಾಖೆಯ ಸಂಬಂಧಿಸಿದಂತ ಅಧಿಕಾರಿಗಳು ಖಡಕ್ ವಾರ್ನಿಂಗ್ ಮಾಡಿದೆ.
ಈ ಹಿನ್ನಲೆಯಲ್ಲಿ ತಮ್ಮ ಮೇಲೂ ಕ್ರಮ ಆಗುವುದನ್ನು ಅರಿತಿರೋ ಶಿಕ್ಷಕರು, ಈಗ ಇಲ್ಲ ಸಲ್ಲದ ಆರೋಪಗಳ ಸುರಿಮಳೆಯನ್ನೇ ವಿದ್ಯಾರ್ಥಿಯ ಮೇಲೆ ಮಾಡುತ್ತಿರುವುದು ಮಾತ್ರ ಪೋಷಕರನ್ನು ಘಾಸಿಗೊಳಿಸಿದಂತಿದೆ. ಅಲ್ಲ ಸಾರ್ ನಮ್ಮ ಮಗನನ್ನು ನೀವು ಹೀಗೆ ಬಾಸುಂಡೆ ಬರುವಂತೆ ಹೊಡೆದೇ ಬುದ್ಧಿ ಹೇಳಬೇಕಿತ್ತಾ? ನಿಮ್ಮ ಸೈಕಾಲಜಿ ಹಿನ್ನಲೆಯಲ್ಲೂ ತಿಳಿ ಹೇಳಿ ಬದಲಾಯಿಸಬೇಕಿತ್ತು ಅಲ್ವ ಎಂಬುದು ಹಲ್ಲೆಗೊಳಗಾದಂತ ಸುಶ್ರುತ ಪೋಷಕರ ಕಿಡಿ ನುಡಿ.
ಜನಪ್ರತಿನಿಧಿಗಳ ಮನೆ ಎಡತಾಕಿದ ಶಿಕ್ಷಕರು
ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಿಂದ ಸುಮೋಟೋ ಕೇಸ್ ದಾಖಲಾಗುತ್ತಿದ್ದಂತ ಜನಪ್ರತಿನಿಧಿಗಳ ಮನೆಗೂ ಎಡತಾಕಿರುವಂತ ಶಿಕ್ಷಕರ ಟೀಂ, ವಿದ್ಯಾರ್ಥಿ ಹಾಗೆ ಸಾರ್, ಹೀಗೆ ಮಾಡ್ತಿದ್ದ. ಎಷ್ಟೇ ಹೇಳಿದ್ರೂ ಕೇಳ್ತಾ ಇರಲಿಲ್ಲ. ಹಾಗೇ, ಹೀಗೆ ಅಂತ ಇಲ್ಲ ಸಲ್ಲದ ವಿಚಾರವನ್ನು ಹೇಳಿ ಬಂದಿದ್ದಾರೆ ಎಂಬುದು ಬಲ್ಲ ಮೂಲಗಳ ಮಾಹಿತಿಯಾಗಿದೆ. ಅಲ್ಲೂ ಕೂಡ ವಿದ್ಯಾರ್ಥಿಯೊಬ್ಬನ ತೇಜೋವಧೆ ಮಾಡುವ ಕೆಲಸ ಮಾಡಲಾಗಿದೆ ಅನ್ನೋದು ಹಲವರ ಆರೋಪ.
ಹಾಗಾದ್ರೇ ನೀವೆಂಥ ಶಿಕ್ಷಕರು ಎಂಬುದು ಸಾರ್ವಜನಿಕರ ಮಾತಾಗಿದೆ. ಹೊಡೆದೇ ಬುದ್ಧಿ ಹೇಳೋ ಅಗತ್ಯವಿರಲಿಲ್ಲ. ಪೋಷಕರನ್ನು ಕರೆಸಿ, ಅವರಿಂದಲೂ ಬುದ್ಧಿ ಹೇಳಿಸಬಹುದಾಗಿತ್ತು. ತಿದ್ದಿ ಕೊಳ್ಳೋದಕ್ಕೆ ಅವಕಾಶ ನೀಡಬಹುದಾಗಿತ್ತು. ತಿದ್ದಿ ಕೊಳ್ಳದೇ ಇದ್ದಾಗ ಬೇರೊಂದು ಕಾನೂನಾತ್ಮಕ ಅಸ್ತ್ರಗಳನ್ನು ಪ್ರಯೋಗಿಸಬಹುದಾಗಿತ್ತು. ಅದನ್ನು ಬಿಟ್ಟು ವಿದ್ಯಾರ್ಥಿಯ ಮೇಲೆ ತೀವ್ರ ತರದ ಹಲ್ಲೆ ಮಾಡಿ, ನಿಮ್ಮನ್ನು ನೀವು ಕಾನೂನಿನ ಕುಣಿಕೆಯಿಂದ ಉಳಿಸಿಕೊಳ್ಳೋದಕ್ಕೆ ವಿದ್ಯಾರ್ಥಿಯ ವ್ಯಕ್ತಿತ್ವದ ಮೇಲೆ ಮಸಿ ಬಳಿಯೋದು ತಪ್ಪಲ್ವ ಎಂಬುದು ಅನೇಕರ ಮಾತಾಗಿದೆ.
ಕಾನೂನು ಎಲ್ಲರಿಗೂ ಒಂದೇ ನೆನಪಿರಲಿ
ಈಗ ಹಲ್ಲೆಗೆ ಒಳಗಾಗಿರುವಂತ ವಿದ್ಯಾರ್ಥಿಯೇ ಮುಂದೊಂದು ದಿನ ಉತ್ತಮ ನಡತೆ ಗುಣವುಳ್ಳ, ಸಮಾಜಕ್ಕೆ ಮಾದರಿಯಾಗ ಬಲ್ಲ ನಡೆಯ ವ್ಯಕ್ತಿಯಾಗಬಹುದು. ಆ ರೀತಿಯಾಗಿ ರೂಪಿಸಬೇಕಿದ್ದಂತ ಸಾಗರ ತಾಲ್ಲೂಕಿನ ಶೆಡ್ತೀಕೆರೆಯ ಸರ್ಕಾರಿ ಶಾಲೆಯ ಶಿಕ್ಷಕರೇ ತಮ್ಮನ್ನು ತಾವು ಉಳಿಸಿಕೊಳ್ಳೋದಕ್ಕೆ ವಿದ್ಯಾರ್ಥಿಗೆ ಬ್ಯಾಡ್ ಕ್ಯಾರಕ್ಟರ್ ಸರ್ಟಿಫಿಕೇಟ್ ಕೊಟ್ಟಿದ್ದು ಮಾತ್ರ ನಾವು ಒಪ್ಪುವುದಿಲ್ಲ ಎಂಬುದು ಪ್ರತಿ ಮಕ್ಕಳ ಪೋಷಕರ ಕಟು ನುಡಿ. ಸದ್ಯ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಂಗಳದಲ್ಲಿ ಕೇಸ್ ಇದೆ. ಕಾನೂನು ಎಲ್ಲರಿಗೂ ಒಂದೆ. ವಿದ್ಯಾರ್ಥಿಯ ಮೇಲೆ ಹಲ್ಲೆ ಮಾಡಿದಂತ ಎಲ್ಲರ ಮೇಲೂ ಕ್ರಮವಾಗಬೇಕು. ಸುಖಾ ಸುಮ್ಮನೇ ವಿದ್ಯಾರ್ಥಿಯ ವ್ಯಕ್ತಿತ್ವಕ್ಕೆ ಮಸಿ ಬಳಿಯುವಂತ ಕೆಲಸ ಮಾಡೋದು ನಿಲ್ಲಬೇಕು ಅನ್ನೋದು ಮಕ್ಕಳ ಪೋಷಕರ ಆಗ್ರಹವಾಗಿದೆ. ಆ ನಿಟ್ಟಿನಲ್ಲಿ ಶಿಕ್ಷಕರು ನಡೆದುಕೊಳ್ಳುತ್ತಾರಾ ಅನ್ನೋದು ಯಕ್ಷ ಪ್ರಶ್ನೆ. ಅದೇನೇ ಆಗಿರಲಿ ಈಗ ಮಾಡಿದ ತಪ್ಪಿಗೆ ಇವರ ಮೇಲೆ ಶಾಲಾ ಶಿಕ್ಷಣ ಇಲಾಖೆಯಿಂದ ಯಾವ ಕ್ರಮ ಆಗಲಿದೆ ಎಂಬುದನ್ನು ಕಾದು ನೋಡಬೇಕಿದೆ.








